ಸೋಮವಾರಪೇಟೆ, ಫೆ. 10: ಸಮೀಪದ ಗೋಣಿಮರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಅಂಬಿಕ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನದ ವಿವಿಧ ಪ್ರಾಕಾರಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಲಾಭಿವೃದ್ಧಿ ಸಮಿತಿ ಸದಸ್ಯ ಜಿ.ಎಂ. ಮೋಹನ್ ಮಾತನಾಡಿ, ಆರೋಗ್ಯ ವಂತ ಜೀವನಕ್ಕೆ ಯೋಗಾಸನ ಸಹಕಾರಿಯಾಗಿದ್ದು, ಎಳೆಯ ವಯಸ್ಸಿನಿಂದಲೇ ಅಭ್ಯಸಿಸಿದರೆ ಜೀವನದ ಕೊನೆಯವರೆಗೂ ಆರೋಗ್ಯವಂತರಾಗಿರಬಹುದು ಎಂದರು. ಇದರೊಂದಿಗೆ ಸರ್ಕಾರಿ ಶಾಲೆಯಲ್ಲಿ ಪಾಠ ಪ್ರವಚನದೊಂದಿಗೆ ಮಕ್ಕಳಿಗೆ ಕರಾಟೆ, ಕ್ರೀಡೆಗಳ ಬಗ್ಗೆಯೂ ತರಬೇತಿ ನೀಡುತ್ತಿರುವದು ಶ್ಲಾಘನೀಯ. ಪ್ರಸಕ್ತ ವರ್ಷ ಶಾಲೆಗೆ ಸ್ವಚ್ಛ ವಿದ್ಯಾಲಯ ಪುರಸ್ಕಾರ ಪ್ರಶಸ್ತಿ ಲಭಿಸಿದ್ದು, ಸರ್ಕಾರಿ ಶಾಲೆಗೆ ಹೆಮ್ಮೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸದಸ್ಯರಾದ ನಾಗೇಶ್, ಹರೀಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇತನ್, ಮುಖ್ಯೋಪಾಧ್ಯಾಯ ವೀರಪ್ಪ ಮಡಿವಾಳ, ಶಿಕ್ಷಕರಾದ ರಾಮಚಂದ್ರ, ಕಮಲಮ್ಮ, ಶ್ರೀಕಾಂತ್, ಈರಗೌಡ ಬಸಲಿಂಗ ಪಾಟೀಲ್, ಅಂಬಿಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.