ಭಾಗಮಂಡಲ, ಫೆ. 10: ಧಾರ್ಮಿಕ ಪದ್ಧತಿಯ ಕಟ್ಟುಪಾಡಿನಂತೆ ದೇವಾಲಯದ ಪೂಜಾ ಕೈಂಕರ್ಯಗಳನ್ನು ನಿರ್ವಹಿಸುವಂತೆ ಕ್ರಮಕೈಗೊಳ್ಳುವದಾಗಿ ಶ್ರೀ ಭಗಂಡೇಶ್ವರ-ತಲಕಾವೇರಿ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದ್ದಾರೆ.ಶ್ರೀ ಭಗಂಡೇಶ್ವರ ದೇವಾಲಯ ಆವರಣದಲ್ಲಿ ಸ್ಥಳೀಯ ದೇವಾಲಯಗಳ ಅರ್ಚಕ ಕುಟುಂಬ, ತಕ್ಕ ಮುಖ್ಯಸ್ಥರು ಹಾಗೂ ಪ್ರಮುಖರಿಂದ ದೇವಾಲಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವ ಸಲುವಾಗಿ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಆಯೋಜಿಸಿದ ಸಭೆಯಲ್ಲಿ ಅವರು ಮಾತನಾಡಿದರು.

ದೇವಾಲಯಗಳ ಧಾರ್ಮಿಕ ಕಾರ್ಯಗಳ ಬಗ್ಗೆ ಸ್ಥಳೀಯರಿಗೆ ಹೆಚ್ಚಿನ ಮಾಹಿತಿಯಿದ್ದು, ಅಷ್ಟಮಂಗಲದಲ್ಲಿ ಕಂಡುಬಂದಂತೆ ಸಾಂಪ್ರದಾಯಿಕ ವಾಗಿ, ಧಾರ್ಮಿಕವಾಗಿ ನಡೆದುಕೊಂಡು ಹೋಗುವದಾಗಿ ತಿಳಿಸಿದರು. ದೇವಸ್ಥಾನ ಜಾಗಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಕೈಗೊಳ್ಳಲಾಗುವದು. ಮಾರ್ಚ್ ಅಂತ್ಯದೊಳಗೆ ಶ್ರೀ ಭಗಂಡೇಶ್ವರ ದೇವಾಲಯದ ದ್ವಾರದ ವ್ಯವಸ್ಥೆ ಮಾಡಲಾಗುವದು. ದೇವಾಲಯಗಳಲ್ಲಿ ಮೊಬೈಲಿನ ಚಿತ್ರೀಕರಣಕ್ಕೆ ಕಡಿವಾಣ ಹಾಕಲಾಗುವದು. ಮುಂದಿನ 10-15 ದಿನದಲ್ಲಿ ಪೂಜಾ ರಸೀದಿಯನ್ನು ಕಂಪ್ಯೂಟರೀಕರಣ ಮಾಡಲಾಗುವದು. ಪಿಂಡ ಪ್ರದಾನ ಮತ್ತು ಮುಡಿ ತೆಗೆಯುವದನ್ನು ವ್ಯವಸ್ಥಿತವಾಗಿ ಕೈಗೊಳ್ಳುವದರೊಂದಿಗೆ ಈ ಜಾಗದಲ್ಲಿ ಮಳಿಗೆ ಕಾಂಪ್ಲೆಕ್ಸ್ ತೆರೆಯುವ ಚಿಂತನೆಯಿದೆ. ಶ್ರೀ ಭಗಂಡೇಶ್ವರ ದೇವಾಲಯ ಹಿಂಬದಿ ಕಟ್ಟಡವನ್ನು ತೆರವುಗೊಳಿಸಿ ಸಭಾಂಗಣ ಮತ್ತು ವ್ಯವಸ್ಥಾಪನಾ

(ಮೊದಲ ಪುಟದಿಂದ) ಸಮಿತಿಯ ಕಚೇರಿ ಕೊಠಡಿ ಮಾಡಲಾಗುವದು ಎಂದು ಹೇಳಿದರು.

ಇದಕ್ಕೂ ಮುನ್ನ ಸಲಹೆ ನೀಡಿದ ರಾಜೇಶಾಚಾರ್ ತಲಕಾವೇರಿಯಲ್ಲಿ ಬ್ರಹ್ಮಗಿರಿ ಅಗಸ್ತ್ಯ ಮುನಿ ಸಾನಿಧ್ಯವಾಗ ಬೇಕು. ಬ್ರಹ್ಮಗಿರಿಗೆ ಹೋಗುವವರಿಗೆ ಕೆಳಗಡೆ ಲಾಕರ್ ವ್ಯವಸ್ಥೆ ಆಗಬೇಕು. ವೆಬ್‍ಸೈಟ್‍ನಲ್ಲಿ ಪೂಜಾ ಮಾಹಿತಿ ಲಭ್ಯವಾಗುವಂತಾಗಬೇಕು ಎಂದರು.

ನಾರಾಯಣಾಚಾರ್ ಮಾತನಾಡಿ ಅರ್ಚಕರು ಪೌಳಿಯಲ್ಲಿ ಕುಟುಂಬಸ್ಥರಾಗಿ ವಾಸಿಸುವದು ಸರಿಯಲ್ಲ. ಅವರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಅಗತ್ಯ. ದೇವಾಲಯ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಮಧ್ಯಾಹ್ನ 1 ಗಂಟೆ ಅವಧಿ ವಿಶ್ರಾಂತಿ ಅಗತ್ಯವಿದ್ದು, ತಲಕಾವೇರಿಗೆ ರಾತ್ರಿ ನಿಷೇಧ ಮಾಡಬೇಕು ಎಂದರು.

ವಿಠಲಾಚಾರ್ ಮಾತನಾಡಿ, ತಲಕಾವೇರಿ ದೇವಾಲಯಕ್ಕೆ ದ್ವಾರದ ಬಳಿಯೇ ಕಾಲು ತೊಳೆದು ಒಳಪ್ರವೇಶಿಸಲು ದ್ವಾರದ ಬಳಿ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ದೇವಾಲಯದ ಪೂಜಾ ಮತ್ತು ಬ್ರಹ್ಮಗಿರಿಯ ಮಾಹಿತಿಯನ್ನು ನೀಡುವವರ ಅಗತ್ಯವಿದ್ದು, ಸಿಬ್ಬಂದಿಗಳಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.

ಹೊಸೂರು ಸತೀಶ್‍ಕುಮಾರ್ ಮಾತನಾಡಿ, ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಧಾರ್ಮಿಕ ಭಾವನೆಗೆ ಅಡಚಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ದೇವಾಲಯದಲ್ಲಿ 5 ಭಾಷೆಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬೇಕು. ತಲಕಾವೇರಿಯಲ್ಲಿ ರಸೀದಿ ಪಡೆದು ಪೂಜೆಗೆ ತೆರಳುವದಕ್ಕೆ ಅವಕಾಶ ಮಾಡಿಕೊಡಬೇಕು. ಬ್ರಹ್ಮಗಿರಿ ಬೆಟ್ಟದಲ್ಲಿ ಸಿಬ್ಬಂದಿಗಳ ನಿಯುಕ್ತಿ ಆಗಬೇಕು. ಭಾಗಮಂಡಲ ದೇವಾಲಯ ಹಿಂಬದಿ ಲೋಕೋಪಯೋಗಿ ಇಲಾಖೆಯ ಜಾಗವಿದೆ. ಇಲಾಖೆಯ ಅಧಿಕಾರಿಗಳೊಂದಿಗೆ ವ್ಯವಹರಿಸಿ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳುವದಕ್ಕೆ ಕ್ರಮಕೈಗೊಳ್ಳಬೇಕು. ಪ್ರವಾಸಿಗರಿಗೆ ಅಡುಗೆ ಮಾಡಲು ಪ್ರತ್ಯೇಕ ಕಟ್ಟಡ ಕಟ್ಟಿಕೊಡುವದು ಒಳ್ಳೆಯದು ಎಂದು ಹೇಳಿದರು.

ಹೊಸಗದ್ದೆ ಭಾಸ್ಕರ್ ಮಾತನಾಡಿ, ತ್ರಿವೇಣಿ ಸಂಗಮದ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಬ್ರಹ್ಮಗಿರಿ ನಿರ್ಬಂಧ ಬೇಡ ಎಂದರು.

ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಧಾರ್ಮಿಕ ಭಾವನೆಯ ನಾಮಫಲಕ ಅಳವಡಿಕೆ, ಕಸ ಹಾಕುವವರಿಗೆ ದಂಡ ವಿಧಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಬಾರಿಕೆ ವೆಂಕಟ್ರಮಣ ಹೇಳಿದರು.

ಎಸ್.ಎಸ್. ಸಂಪತ್‍ಕುಮಾರ್ ಮಾತನಾಡಿ, ಅರ್ಚಕರು ಸಂಪ್ರದಾಯವನ್ನು ಪಾಲಿಸಬೇಕು. ರುದ್ರಪಠಣ ಇನ್ನಿತರ ಪೂಜಾ ಕಾರ್ಯಗಳನ್ನು ಸರಿಯಾಗಿ ಆಗುವಂತಾಗಬೇಕು. ಪಿಂಡ ಪ್ರದಾನ ಪ್ರದೇಶದಲ್ಲಿ ಶೀಟು ಅಳವಡಿಕೆ ಅಗತ್ಯ. ಯಾತ್ರಿಭವನಕ್ಕೆ ರೂ. 80 ಲಕ್ಷ ಮಂಜೂರಾಗಿದ್ದು, ವಾಪಾಸು ಹೋಗುವ ಹಂತದಲ್ಲಿದೆ. ಕೂಡಲೇ ಬಳಸುವಂತಾಗಬೇಕು ಎಂದರು.

ಬೆಳಿಗ್ಗೆ 6 ರಿಂದ ಸಂಜೆ 8ರ ತನಕ ದೇವಾಲಯದ ಸೇವಾ ಕೌಂಟರ್ ತೆರೆಯಬೇಕು ಎಂದು ರವೀಂದ್ರ ಹೆಬ್ಬಾರ್ ಹೇಳಿದರು.

ಕುದುಪಜೆ ಪ್ರಕಾಶ್ ಮತ್ತು ಸೂರ್ತಲೆ ಜಯಂತ್ ಅವರು ದೇವಾಲಯದಲ್ಲಿ ಮೊಬೈಲ್ ಚಿತ್ರೀಕರಣ ನಿಷೇಧಿಸಬೇಕು. ಸಂಗಮದಲ್ಲಿ ಕಾವೇರಿ ನದಿಯ ಏಳು ಮೆಟ್ಟಿಲುಗಳು ಹೂಳು ತುಂಬಿದ್ದು, 3 ಮೆಟ್ಟಿಲು ಮಾತ್ರ ಕಾಣುತ್ತಿದೆ. ಹೂಳು ತೆಗೆಯುವ ಕೆಲಸ ಆಗಬೇಕು ಎಂದರು.

ಬೆಳಿಗ್ಗೆ ಮತ್ತು ಸಂಜೆ ಅನ್ನದಾನ ಪ್ರಸಾದದ ವ್ಯವಸ್ಥೆ ಮಾಡಿದರೆ ಅಶುಚಿತ್ವಕ್ಕೆ ಕಡಿವಾಣ ಸಾಧ್ಯ ಎಂದು ಕೊಲ್ಯದ ಗಿರೀಶ್ ಹೇಳಿದರೆ, ತಲಕಾವೇರಿಯಲ್ಲಿ ಸೋಲಾರ್ ದೀಪದ ವ್ಯವಸ್ಥೆ ಅಗತ್ಯವಿದೆ ಎಂದು ಕೋಡಿ ಮೋಟಯ್ಯ ಹೇಳಿದರು. ಸಭೆಯಲ್ಲಿ ಹಲವು ಸಲಹೆಗಳನ್ನು ಸ್ಥಳೀಯ ಪ್ರಮುಖರು ನೀಡಿದರು.

ಈ ಸಂದರ್ಭ ಸ್ಥಳೀಯ ಅರ್ಚಕ ಕುಟುಂಬದವರು, ತಕ್ಕರಾದ ಬಳ್ಳಡ್ಕ ಅಪ್ಪಾಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಿಡ್ಯಮಲೆ ಮೀನಾಕ್ಷಿ, ಕೆದಂಬಾಡಿ ರಮೇಶ್, ಅಣ್ಣಯ್ಯ, ಉದಿಯಂಡ ಸುಭಾಷ್, ಅರ್ಚಕ ರವಿಕುಮಾರ್, ಸಿರಕಜೆ ಸುಂದರ, ದೇವಾಲಯ ಕಾರ್ಯನಿರ್ವಹಣಾಧಿ ಕಾರಿ ಜಗದೀಶ್‍ಕುಮಾರ್ ಹಾಗೂ ಸ್ಥಳೀಯ ದೇವಾಲಯಗಳ ಪ್ರಮುಖರು ಹಾಗೂ ಇತರರು ಇದ್ದರು.