ಮಡಿಕೇರಿ, ಫೆ. 10: ಮಡಿಕೆರಿ ನಗರಸಭೆ ವ್ಯಾಪ್ತಿಯ ಎಲ್ಲಾ ನಿರಾಶ್ರಿತರು ಮತ್ತು ಕೊಳಚೆ ಪ್ರÀದೇಶದ ಬಡವರ್ಗದ ಮಂದಿಗೆ ನಿವೇಶನ ವನ್ನು ಒದಗಿಸಲು ಜಿಲ್ಲಾಡಳಿತ ಆಸಕ್ತಿ ವಹಿಸಬೇಕೆಂದು ಆಗ್ರಹಿಸಿ ತಾ. 12 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಅಮಿನ್ ಮೊಹಿಸಿನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ಕೋರಿ ಮಡಿಕೇರಿ ನಗರಸಭೆÉಗೆ ಸುಮಾರು 2,500 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 1468 ಅರ್ಜಿಗಳನ್ನು ಪುರಸ್ಕರಿಸಿರುವ ನಗರಸಭೆ ಕೇವಲ 5 ಎಕರೆ ಜಾಗವನ್ನು ಹೆಬ್ಬೆಟ್ಟಗೇರಿ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಿದೆ. ಈ ಜಾಗದಲ್ಲಿ ಎಲ್ಲಾ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗುವದಿಲ್ಲ. ಕನಿಷ್ಟ ಒಂದು ಮುಕ್ಕಾಲು ಸೆಂಟ್‍ನಂತೆ ಹಂಚಿಕೆ ಮಾಡಿದರು ಶೇ. 10 ರಷ್ಟು ಮಂದಿಗೆ ಮಾತ್ರ ಜಾಗ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲಾ ಅರ್ಜಿದಾರರಿಗೆ ನಿವೇಶನ ನೀಡಲು ನಗರಸಭೆ ವ್ಯಾಪ್ತಿಯ ಪೈಸಾರಿ ಜಾಗವನ್ನು ಬಳಸಿಕೊಳ್ಳಬೇಕೆಂದು ಒತ್ತಾಯಿಸಿದರು.

94ಸಿ ಮತ್ತು 94ಸಿಸಿ ಮೂಲಕ ಅರ್ಜಿ ಸಲ್ಲಿಕೆಯಾಗಿದ್ದರೂ ಅರ್ಹರಿಗೆ ಹಕ್ಕುಪತ್ರ ವಿತರಿಸಿಲ್ಲ. ಸಿ ಮತ್ತು ಡಿ ಭೂಮಿಯ ನೆಪವೊಡ್ಡಿ ಅರ್ಹರಿಗೆ ಭೂಮಿಯ ಹಕ್ಕು ಸಿಕ್ಕದಂತೆ ಮಾಡಲಾಗುತ್ತಿದೆ.

ಸಿ ಮತ್ತು ಡಿ ಭೂಮಿಯ ನಿರ್ಬಂಧವನ್ನು ಹಿಂಪಡೆದಿರುವ ಬಗ್ಗೆ ಸರ್ಕಾರ ಮೌಖಿಕ ಆದೇಶವನ್ನಷ್ಟೆ ನೀಡಿದ್ದು, ಇದನ್ನು ಲಿಖಿತ ರೂಪದಲ್ಲಿ ಅಧಿಕೃತವಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ನಗರದ ಕೊಳಚೆ ಪ್ರದೇಶಗಳಾದ ಇಂದಿರಾನಗರ, ಚಾಮುಂಡೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಮಂಗಳಾದೇವಿ ನಗರ, ಜ್ಯೋತಿ ನಗರ, ಮಲ್ಲಿಕಾರ್ಜುನ ನಗರ, ಪುಟಾಣಿ ನಗರ, ರಾಜರಾಜೇಶ್ವರಿ ನಗರದ ನಿವೇಶನ ರಹಿತ ಪ್ರತಿಯೊಂದು ಬಡ ಕುಟುಂಬಕ್ಕು ನಿವೇಶನ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

ಈ ಬಗ್ಗೆ ಸ್ಪಷ್ಟ ಉತ್ತರ ಸಿಗದಿದ್ದಲ್ಲಿ ತಾ. 12 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಿವೇಶನ ರಹಿತ ಅರ್ಜಿದಾರರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಲೆ ನಿಂತಿದ್ದ ಮಾಜಿ ಸೈನಿಕರು ಹಾಗೂ ಕ್ಯಾನ್ಸರ್ ರೋಗಿ ಇದ್ದ ಕುಟುಂಬವನ್ನು ಜಿ.ಪಂ. ಕಟ್ಟಡ ನಿರ್ಮಾಣಕ್ಕೆಂದು ಬೀದಿಪಾಲು ಮಾಡಿ ಮೂರೂವರೆ ವರ್ಷ ಕಳೆದಿದೆ. ಆದರೆ, ಇಲ್ಲಿಯವರೆಗೆ ನಿರಾಶ್ರಿತರಿಗೆ ನೆಲೆ ಕಲ್ಪಿಸುವ ಕಾಳಜಿಯನ್ನು ಜಿಲ್ಲಾಡಳಿತ ತೋರಿಲ್ಲವೆಂದು ಅಮಿನ್ ಮೊಹಿಸಿನ್ ಆರೋಪಿಸಿದರು.

ಹೋರಾಟ ಸಮಿತಿಯ ಸದಸ್ಯ ಹಾಗೂ ಬಹುಜನ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವ ಯಾವದೇ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲವೆಂದು ಆರೋಪಿಸಿದರು.

ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿರು ವದಾಗಿ ಹೇಳಿಕೊಳ್ಳುತ್ತಿದೆ. ಆದರೆ, ಜಿಲ್ಲೆಯಲ್ಲಿರುವ ಬಡವರ ಬವಣೆ ಇನ್ನೂ ತೀರಿಲ್ಲ. ಉಳ್ಳವರ ಪರ ಆಡಳಿತ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಪಾಲೆÉೀಮಾಡಿನ ಸ್ಮಶಾನದ ಜಾಗದ ವಿವಾದ ಇನ್ನೂ ಕೂಡ ಬಗೆಹರಿದಿಲ್ಲವೆಂದು ಆರೋಪಿಸಿದರು.

ಗೋಷ್ಠಿಯಲ್ಲಿ ಷಂಶುದ್ದೀನ್, ಮೊಹಮ್ಮದ್, ಉಮ್ಮರ್ ಹಾಗೂ ಆಲಿ ಉಪಸ್ಥಿತರಿದ್ದರು.