ಕೂಡಿಗೆ, ಫೆ. 10: ಅರಣ್ಯ ಇಲಾಖೆ, ಸೋಮವಾರಪೇಟೆ ವಲಯ, ಬಾಣವಾರ ಉಪ ವಲಯ ಹಾಗೂ ಗ್ರಾಮ ಅರಣ್ಯ ಸಮಿತಿಗಳ ಸಹಯೋಗದೊಂದಿಗೆ ಬಾಣವಾರ ಅರಣ್ಯ ಕಚೇರಿ ಆವರಣದಲ್ಲಿ ಬೆಂಕಿಯಿಂದ ಅರಣ್ಯ ರಕ್ಷಣೆ ಕುರಿತು ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ಮಾತನಾಡಿ, ಮನುಕುಲಕ್ಕೆ ಅತಿ ಅಮೂಲ್ಯವಾದ ನೀರು, ಗಾಳಿ ಅರಣ್ಯ ದೊರೆಯುತ್ತದೆ. ಅರಣ್ಯವನ್ನು ಕಾಪಾಡಿದಾಗ ಜಲಮೂಲ ವೃದ್ಧಿಗೊಂಡು ಯಥೇಚ್ಛವಾಗುತ್ತದೆ. ಇದರಿಂದ ಅರಣ್ಯಕ್ಕೆ ಬೆಂಕಿ ಬೀಳದ ರೀತಿಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಎನ್. ಲಕ್ಷ್ಮಿಕಾಂತ್ ಮಾತನಾಡಿ, ಅರಣ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದಾಗ ಅರಣ್ಯ ಪುನಶ್ಚೇತನಗೊಳ್ಳಲು ಕನಿಷ್ಟ ಮೂರು ವರ್ಷವಾದರು ಬೇಕಾಗುತ್ತದೆ. ಅರಣ್ಯದಲ್ಲಿನ ಪ್ರಾಣಿ ಮತ್ತು ಜೀವ ಜಂತುಗಳು ನಾಶವಾಗಿ ಭಾರೀ ಕಷ್ಟ ಅನುಭವಿಸಬೇಕಾಗುತ್ತದೆ. ಇವುಗಳ ಸಂರಕ್ಷಣೆಗೆ ಗ್ರಾಮ ಅರಣ್ಯ ಸಮಿತಿಯವರು ಹಾಗೂ ಅರಣ್ಯಕ್ಕೆ ಬೆಂಕಿ ತಗಲದ ಹಾಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯತೆ ಇರುತ್ತದೆ ಎಂದರು.

ಈ ಸಂದರ್ಭ ಶನಿವಾರಸಂತೆ ವಲಯಾರಣ್ಯಾಧಿಕಾರಿ ಕೊಟ್ರೇಶ್, ಬಾಣಾವರ ಉಪ ವಲಯ ಅರಣ್ಯಾಧಿಕಾರಿ ಮಹಾದೇವ ನಾಯಕ್, ಮಾದಾಪುರ ಉಪ ವಲಯ ಅರಣ್ಯಾಧಿಕಾರಿ ಸಂತೋಷ್, ಅರಣ್ಯ ರಕ್ಷಣಾ ಸಮಿತಿಯ ಮುಖ್ಯಸ್ಥ ಗೋವಿಂದ್, ಗಣಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಶಿವಕುಮಾರ್, ಸದಸ್ಯ ಶಶಿಕುಮಾರ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಭುವಂಗಾಲ ಗ್ರಾಮ ಅರಣ್ಯ ಸವಿತಿಯ ಅಧ್ಯಕ್ಷ ಮಾಚಯ್ಯ, ಎರೆಪಾರೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯರಾಮ್, ಆಡಿನಾಡೂರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ದಿಲೀಪ್, ಗ್ರಾಮ ಅರಣ್ಯ ಸಮಿತಿಯ ಸದಸ್ಯರು, ಮಹಿಳಾ ಘಟಕದ ಸದಸ್ಯರು, ಸ್ವ-ಸಹಾಯ ಗುಂಪಿನ ಸದಸ್ಯರು, ಗ್ರಾಮಸ್ಥರು ಇದ್ದರು.