ಶ್ರೀಮಂಗಲ, ಫೆ. 10: ಜಿಲ್ಲೆಯ ಮೂಲಕ ಹಲವು ರೈಲ್ವೆ ಮಾರ್ಗದ ಯೋಜನೆಯಿಂದ ಜಿಲ್ಲೆಯ ಅಸ್ಥಿತ್ವಕ್ಕೆ ಧಕ್ಕೆಯಾಗಲಿದ್ದು, ಇದನ್ನು ತಡೆಯಲು ತಾ. 18 ರಂದು ಮೈಸೂರಿನ ಆಗ್ನೇಯ ರೈಲ್ವೆ ಕಚೇರಿ ಎದುರು ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆಯ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ಜಿಲ್ಲೆಯ ಎಲ್ಲಾ ಸಮುದಾಯ ಮತ್ತು ರಾಜಕೀಯ ಪಕ್ಷಗಳು ಜಿಲ್ಲೆಯ ಹಿತದೃಷ್ಟಿಯಿಂದ ಬೆಂಬಲ ನೀಡಬೇಕೆಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ತಿಳಿಸಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ಮಾರಕವಾದ ರೈಲ್ವೆ ಯೋಜನೆಯನ್ನು ಪ್ರತಿಭಟಿಸಲು ವೇದಿಗೆ ಕಲ್ಪಿಸಿದ್ದು, ಎಲ್ಲಾ ಸಮುದಾಯ, ಸಂಘ-ಸಂಸ್ಥೆಗಳನ್ನು ಒಂದು ಗೂಡಿಸುವ ಜವಾಬ್ದಾರಿ ನೀಡಿದೆ.

ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆಯ ವತಿಯಿಂದ ನಡೆಸುತ್ತಿರುವ ಈ ಹೋರಾಟಕ್ಕೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಈ ಒಂದು ಯೋಜನೆಯಿಂದ ಕೊಡಗು ಜಿಲ್ಲೆಯ ಭೌಗೋಳಿ ಲಕ್ಷಣ, ಸಾಮಾಜಿಕ ಸ್ವಾಸ್ಥ್ಯ ಹಾಳಾಗಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿರುವ ಬೆಳೆಗಾರರು, ರೈತರು, ಆದಿವಾಸಿಗಳು, ಮೂಲ ನಿವಾಸಿಗಳು, ಬುಡಕಟ್ಟು ಜನಾಂಗ ಹಾಗೂ ವಿವಿಧ ಜಾತಿ ಜನಾಂಗದವರು ತಮ್ಮ ನೆಲೆಯನ್ನು ಕಳೆದುಕೊಂಡು ಅತಂತ್ರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ತಾ. 18 ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಜೆಕೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಜಿಲ್ಲೆಯ ಪ್ರತಿಯೊಬ್ಬರೂ ಪಾಲ್ಗೊಳ್ಳುವದರ ಮೂಲಕ ಕೊಡಗು ಜಿಲ್ಲೆಯನ್ನು ಉಳಿಸುವ ಕಾರ್ಯದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ನಿರ್ದೇಶಕ ಮೂಕಳೇರ ಲಕ್ಷ್ಮಣ ಮಾತನಾಡಿ, ಈ ರೈಲ್ವೆ ಮಾರ್ಗದಿಂದ ಬಹಳಷ್ಟು ಅನಾಹುತಗಳು ನಡೆಯಲಿದೆ. ರೈಲ್ವೆ ಮಾರ್ಗ ಹಾದು ಹೋಗುವ ಎರಡು ಕಡೆಗಳಲ್ಲೂ 150-200 ಅಡಿ ಸ್ಥಳವನ್ನು ಸರ್ಕಾರ ಸುಪರ್ಧಿಗೆ ತೆಗೆದುಕೊಳ್ಳಲಿದೆ. ಇದರೊಂದಿಗೆ ರೈಲ್ವೆ ಸಾಮಗ್ರಿಗಳ ದಾಸ್ತಾನು ಕೇಂದ್ರಕ್ಕೆ ಮತ್ತಷ್ಟು ಸ್ಥಳಗಳನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದೆ. ಪುಟ್ಟ ಜಿಲ್ಲೆಯಾದ ಕೊಡಗಿನ ಈ ಪ್ರದೇಶದಲ್ಲಿ ರೈಲ್ವೆ ಮಾರ್ಗ ಅನುಷ್ಠಾನವಾದರೆ ನಾವುಗಳೆಲ್ಲ ವಲಸೆ ಹೋಗಬೇಕಾಗುತ್ತದೆ ಎಂದರು.

ಮತ್ತೋರ್ವ ನಿರ್ದೇಶಕ ಮಲ್ಲಮಾಡ ಪ್ರಭು ಪೂಣಚ್ಚ ಮಾತನಾಡಿ, ಪೊನ್ನಂಪೇಟೆ ಕೊಡವ ಸಮಾಜ ಇದರ ಮುಂದಾಳತ್ವ ವಹಿಸುವಂತೆ ತೀರ್ಮಾನಿಸಲಾಗಿದೆ. ಈ ಹೋರಾಟ ಜನ ಶಕ್ತಿಯ ಹೋರಾಟವಾಗಿ ರಾಜಕೀಯ ರಹಿತವಾಗಿ ರೂಪಿಸುವಂತೆ ತೀರ್ಮಾನ ತೆಗೆದುಕೊಳ್ಳಲಾಯಿತು.

ಕಂಬದಕಡ, ಬರಪೊಳೆ ಹೋರಾಟದ ಮಾದರಿಯಲ್ಲಿ ಈ ಹೋರಾಟವನ್ನು ಯಶಸ್ವಿಯ ದಡಕ್ಕೆ ತಲುಪಿಸಲು ಎಲ್ಲಾ ಜನರು ಇದರಲ್ಲಿ ತೊಡಗಿಸಿಕೊಳ್ಳ ಬೇಕೆಂದು ಹೇಳಿದರು.

ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ನಿರ್ದೇಶಕರಾದ ಚೆಪ್ಪುಡಿರ ರಾಕೇಶ್ ದೇವಯ್ಯ, ಮಂಡಂಚಂಡ ದಿನೇಶ್ ಚಿಟ್ಟಿಯಪ್ಪ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಉಪಸ್ಥಿತರಿದ್ದರು.

ಅಖಿಲ ಅಮ್ಮ ಕೊಡವ ಸಮಾಜ ಬೆಂಬಲ

ಶ್ರೀಮಂಗಲ: ಉದ್ದೇಶಿತ ಹಲವು ರೈಲ್ವೆ ಮಾರ್ಗದ ಯೋಜನೆಯನ್ನು ವಿರೋಧಿಸಿ ತಾ. 18 ರಂದು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಅಖಿಲ ಅಮ್ಮ ಕೊಡವ ಸಮಾಜ ಬೆಂಬಲವನ್ನು ವ್ಯಕ್ತಪಡಿಸಿದೆ ಎಂದು ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಈ ಉದ್ದೇಶಿತ ರೈಲ್ವೆ ಯೋಜನೆಯಿಂದ ಕೊಡಗಿಗೆ ಅಪಾರ ಹಾನಿಯಾಗಲಿದೆ. ಜಿಲ್ಲೆಯ ನೆಲ, ಜಲ, ವನ್ಯಸಂಪತ್ತು, ಪ್ರಾಣಿ ಪಕ್ಷಿಗಳು ಹಾಗೂ ಮಾನವ ಹಾನಿಯಾಗಲಿದೆ. ಅಲ್ಲದೆ, ಅನಾದಿಕಾಲದಿಂದಲೂ ಈ ಮಣ್ಣಿನಲ್ಲಿ ಬದುಕು ಕಟ್ಟಿಕೊಂಡಿರುವ ಇಲ್ಲಿಯ ಮೂಲ ನಿವಾಸಿಗಳ ಬದುಕು ಅತಂತ್ರವಾಗಲಿದೆ.

ಕೇವಲ ಕೇರಳ ರಾಜ್ಯವನ್ನು ತೃಪ್ತಿ ಪಡಿಸುವದಕ್ಕಾಗಿ ವಿಶಿಷ್ಟ್ಯ ಸಂಸ್ಕøತಿ, ಪದ್ಧತಿ-ಪರಂಪರೆ, ಹಾಗೂ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಮೈಸೂರು ಬೆಂಗಳೂರು ಮುಂತಾದ ಮಹಾನಗರಗಳಿಗೆ ಶುದ್ಧ ನೀರು ಹಾಗೂ ಗಾಳಿಯನ್ನು ನೀಡುತ್ತಿರುವ ಕೊಡಗನ್ನು ವಿನಾಶ ಮಾಡುವ ಈ ರೈಲ್ವೆ ಮಾರ್ಗವನ್ನು ಪ್ರತಿಯೊಬ್ಬರೂ ಪ್ರತಿಭಟಿಸಬೇಕಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.