ಮಡಿಕೇರಿ, ಫೆ. 10: ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿಂದು ಒಟ್ಟು 160 ಪ್ರಕರಣಗಳು ಇತ್ಯರ್ಥ ಕಂಡಿವೆ.ಮಡಿಕೇರಿ ನ್ಯಾಯಾಲಯದಲ್ಲಿ ನಾಲ್ಕು, ಸೋಮವಾರಪೇಟೆಯಲ್ಲಿ ಎರಡು, ಪೊನ್ನಂಪೇಟೆ ಹಾಗೂ ಕುಶಾಲನಗರದಲ್ಲಿ ತಲಾ ಒಂದು ಹಾಗೂ ವೀರಾಜಪೇಟೆಯಲ್ಲಿ 3 ವಿಭಾಗಗಳಲ್ಲಿ ಒಟ್ಟು 450 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಚೆಕ್ ಅಮಾನ್ಯ-ಸಂಸಾರ ಕಲಹ, ಆಸ್ತಿ ವಿವಾದ, ಹಲ್ಲೆ, ಕಳವು ಮುಂತಾದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೈಗೆತ್ತಿಕೊಳ್ಳಲಾಗಿದ್ದ ಪ್ರಕರಣದಲ್ಲಿ ಒಟ್ಟು 160 ಪ್ರಕರಣಗಳು ಇತ್ಯರ್ಥ ಕಂಡಿವೆ.ಚೆಕ್ ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 92,34,542 ರಷ್ಟು ಹಣ ವಸೂಲಾತಿ ಮಾಡಲಾಗಿದೆ.

ಪ್ರಕರಣ ನ್ಯಾಯಾಲಯಕ್ಕೆ ಹೋಗುವ ಮುನ್ನ ಇತ್ಯರ್ಥಪಡಿಸ ಲಾಗುವ ವ್ಯಾಜ್ಯಪೂರ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಾಲ ಪಾವತಿ ಬಾಕಿ, ದೂರವಾಣಿ ಬಿಲ್ ಮುಂತಾದುವು ಸೇರಿದಂತೆ ಒಟ್ಟು 889 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 111 ಪ್ರಕರಣಗಳು ಸಂಧಾನದ ಮೂಲಕ ಇತ್ಯರ್ಥಗೊಂಡು 5.51 ಲಕ್ಷ ಹಣ ವಸೂಲಾತಿಯಾಗಿದೆ.

ಮಡಿಕೇರಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾ.ಆರ್.ಕೆ.ಜೆ. ಮಹಸ್ವಾಮೀಜಿ, ಒಂದನೇ ಅಪರ

(ಮೊದಲ ಪುಟದಿಂದ) ಜಿಲ್ಲಾ ನ್ಯಾಯಾಧೀಶರಾದ ಪವನೇಶ್ ಡಿ., ಹಿರಿಯ ಸಿವಿಲ್ ಮತ್ತು ಸಿಜೆಂ ಹಾಗೂ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ್‍ಕುಮಾರ್, ಅಪರ ಜಿಲ್ಲಾ ನ್ಯಾಯಾಧೀಶರಾದ ಸಮಿರ ಕಾಮತ್ ಹಾಗೂ ಸರಕಾರಿ ಅಭಿಯೋಜಕ ಶ್ರೀಧರನ್ ನಾಯರ್, ಸಿ.ಎಂ. ಕವೀಂದ್ರ, ಜೆ.ಆರ್. ದೀಪಕ್ ಸಂಧಾನ ಕಾರರಾಗಿ ಕಾರ್ಯನಿರ್ವಹಿಸಿದರು.

ವೀರಾಜಪೇಟೆಯಲ್ಲಿ 2ನೇ ಅಪರ ಜಿಲ್ಲಾ ನ್ಯಾಯಾಧೀಶರಾದ ಮೋಹನ್ ಪ್ರಭು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್, ಅಪರ ಜಿಎಂಎಫ್‍ಸಿ ಬಿ.ಕೆ. ಮನುಮೋಹನ್ ಗೌಡ, ಸೋಮವಾರಪೇಟೆಯ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ದೊಡ್ಡಮುನಿ, ಸಿವಿಲ್ ನ್ಯಾಯಾಧೀಶ ಶ್ಯಾಂಪ್ರಕಾಶ್, ಕುಶಾಲನಗರದಲ್ಲಿ ಸಿವಿಲ್ ಜೆಎಂಎಎಫ್‍ಸಿ ನ್ಯಾಯಾಧೀಶ ನಟರಾಜ್ ಅವರುಗಳು ಕಾರ್ಯನಿರ್ವಹಿಸಿದರು.