ಕುಶಾಲನಗರ, ಫೆ. 10: ಅಭಿವೃದ್ಧಿಯ ನಾಗಾಲೋಟದ ನಡುವೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಉಂಟಾಗಿರುವ ಬಗ್ಗೆ ಮಡಿಕೇರಿ ಸರಸ್ವತಿ ಡಿಇಡಿ ಕಾಲೇಜು ಪ್ರಾಂಶುಪಾಲ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆಶ್ರಯದಲ್ಲಿ ಮಾದಾಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಪಾಲ್ಗೊಂಡು ‘ಬದುಕು ಮತ್ತು ಶಿಕ್ಷಣ’ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಪ್ರತಿಯೊಬ್ಬರಿಗೂ ತಮ್ಮ ಬದುಕಿನ ಬಗ್ಗೆ ಪರಿಕಲ್ಪನೆ ಅಗತ್ಯ. ಶಿಸ್ತು, ಪ್ರಾಮಾಣಿಕತೆಯೊಂದಿಗೆ ಮಾಡುವ ಕೆಲಸದಲ್ಲಿ ಶ್ರದ್ಧೆ ಅತ್ಯಗತ್ಯವಾಗಿದೆ ಎಂದರು.

‘ನದಿ ಸ್ವಚ್ಛತೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ‘ರಕ್ತದಾನ ಮತ್ತು ಹೆಚ್‍ಐವಿ’ ಕುರಿತು ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಶಿಲ್ಪಾ ಮುತ್ತಮ್ಮ ಅರಿವು ಮೂಡಿಸಿದರು.

ಕಾಲೇಜಿನ ಸಿವಿಲ್ ವಿಭಾಗಾಧಿಕಾರಿ ಹೆಚ್.ಜೆ. ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯೆ ಪುಷ್ಪಾ ನಾಗೇಶ್, ಗ್ರಾಮದ ಹಿರಿಯ ವಿಜಯನ್, ಕಾಲೇಜು ಉಪನ್ಯಾಸಕ ವಿನಯ್, ಶಿಕ್ಷಕ ಜಂಶಿದ್ ಅಹಮ್ಮದ್ ಖಾನ್, ಶಿಬಿರಾಧಿಕಾರಿಗಳಾದ ಎ. ಅಸ್ಮತ್, ಹೆಚ್.ಜೆ. ಮಂಜುನಾಥ್ ಇದ್ದರು.

ಶಿಬಿರಾರ್ಥಿಗಳಾದ ಕೆ.ಎಸ್. ಮಹೇಶ್ ದಿನಚರಿ ವಾಚಿಸಿದರು, ಸೋನು ಪ್ರಾರ್ಥಿಸಿ, ಸ್ವಾಗತ್ ಸ್ವಾಗತಿಸಿ, ವಾಸು ನಿರೂಪಿಸಿ, ಮದನ್ ವಂದಿಸಿದರು. ಶಿಬಿರ ತಾ. 11 ರವರೆಗೆ ನಡೆಯಲಿದ್ದು, ಅಂದು ಬೆಳಿಗ್ಗೆ 10.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.