ಗೋಣಿಕೊಪ್ಪಲು, ಫೆ. 10: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಿತಿಮತಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವ್ರತ್ತಿ ಹೆಚ್ಚಲು, ವಿಜ್ಞಾನ ಹಾಗೂ ಗಣಿತ ವಿಚಾರಗಳಲ್ಲಿ ಆಸಕ್ತಿ ಬೆಳೆಸುವ ಸಲುವಾಗಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಜ್ಞಾನ, ಗಣಿತ ಹಾಗೂ ಮಾಹಿತಿ ತಂತ್ರಜ್ಞಾನ ವಿಷಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಸರ್ಕಾರಿ ಶಾಲಾ ಮಕ್ಕಳು ತಾವು ಯಾರಿಗೇನು ಕಡಿಮೆ ಇಲ್ಲ ಎಂಬಂತೆ ವಿನೂತನ ಸಂಶೋಧನಾ ಪ್ರಾತ್ಯಕ್ಷಿಕೆಯ ಪ್ರದರ್ಶನದ ಮೂಲಕ ಗಮನ ಸೆಳೆದರು.

ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳು ಪವನ ಶಕ್ತಿ, ಸೌರ ಶಕ್ತಿ, ನೀರಿನ ಶುದ್ಧೀಕರಣ, ಜಲಮಾಲಿನ್ಯ, ವಾಯು ಮಾಲಿನ್ಯದ ದುಷ್ಪರಿಣಾಮ, ಗಣಕ ಯಂತ್ರದ ಉಪಯೋಗ, ವಿನೋದ ಗಣಿತ, ಮಾನವನ ದೇಹದ ಅಂಗರಚನೆ, ಖನಿಜಗಳು, ಕಲ್ಲಿದ್ದಲು, ಸೋಲಾರ್ ಕುಕ್ಕರ್, ಮಳೆ ಕೊಯ್ಲು, ಮೃಗಾಲಯ, ಕಂಪನ, ಉಷ್ಣದಿಂದ ವಿಕಾಸ, ಹನಿ ನೀರಾವರಿ, ಕೃಷಿ ಸಾಮಗ್ರಿ, ರಾಸಾಯನಿಕ ವಸ್ತು ಸಂಗ್ರಹ ವಿಧಾನ ಇವೇ ಮೊದಲಾದ ವಿಷಯಗಳನ್ನು ಅಳವಡಿಸಿಕೊಂಡು ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದರು.

ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಣೆಗೆ ಭದ್ರಗೊಳ, ನೊಕ್ಯ, ಮರೂರು ಆಶ್ರಮ ಶಾಲೆ, ಪೆÇನ್ನಪ್ಪಸಂತೆ, ಹೆಬ್ಬಾಲೆ ವಿದ್ಯಾರ್ಥಿಗಳನ್ನೂ ಕರೆತರಲಾಗಿತ್ತು. ಮುಖ್ಯ ಶಿಕ್ಷಕಿ ಪಾರ್ವತಿ ಮಾತನಾಡಿ, ಇಲಾಖೆಯಿಂದ ಕೇವಲ ರೂ. 25 ಸಾವಿರ ಅನುದಾನ ದೊರೆತಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅರಣ್ಯ ಕಾಲೇಜು, ಕಿತ್ತಳೆ ಬೆಳೆಗಾರರ ಸಂಘ, ದುಬಾರೆ, ಕೂಡಿಗೆ ಹಾಲಿನ ಡೈರಿ, ನಿಸರ್ಗ ಧಾಮ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ ಇತ್ಯಾದಿಗಳನ್ನು ಮನವರಿಕೆ ಮಾಡಲು ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು ಎಂದರು.

ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಬಿಆರ್‍ಸಿ ಮಹದೇವ ನೆರವೇರಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ದಾನಿಗಳಾದ ಪಾಲೇಂಗಡ ಮನು ನಂಜಪ್ಪ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಕೊಡಂದೇರ ಸ್ವಾತಿ, ವಿಜ್ಞಾನ ಶಿಕ್ಷಕಿ ಪಿ.ಸಿ. ಸುನಿತ ಕುಮಾರಿ ಹಾಗೂ ಶಾಲಾ ಶಿಕ್ಷಕರು, ಪೆÇೀಷಕರು ಪಾಲ್ಗೊಂಡಿದ್ದರು.