ಮಡಿಕೇರಿ, ಫೆ. 11: ಅಹಿಂದಾ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಒಗ್ಗೂಡಿ ಶ್ರಮಿಸಲು ಕೊಡಗು ಜಿಲ್ಲಾ ಅಹಿಂದಾ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್, ಅಹಿಂದಾ ಸಮುದಾಯಗಳ ಸಮಸ್ಯೆಯನ್ನು ನೀಗಿಸಲು ಅಹಿಂದಾಕ್ಕೆ ಒಳಪಡುವ ಎಲ್ಲಾ ಸಮುದಾಯಗಳು ಒಗ್ಗೂಡಬೇಕು. ನಮ್ಮ ಮುಂದಿನ ಅಭ್ಯುದಯದ ಬಗ್ಗೆ ಉತ್ತಮ ಚರ್ಚೆ ಮತ್ತು ಚಿಂತನೆ ನಡೆಯಬೇಕು ಎಂದರು.

ಕೊಡಗು ಜಿಲ್ಲಾ ಅಹಿಂದಾ ಒಕ್ಕೂಟದಲ್ಲಿ 22 ಸಾವಿರ ವಿವಿಧ ಸಮಾಜಗಳ ಕುಟುಂಬಗಳು ಸದಸ್ಯತ್ವ ಪಡೆದುಕೊಂಡಿವೆ. ಒಕ್ಕೂಟವು ಅತ್ಯಂತ ಬಲಿಷ್ಠವಾಗಿದ್ದು, ನಮ್ಮ ಸಮಸ್ಯೆಗಳನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳ ಮುಂದಿಟ್ಟು ಬಗೆಹರಿಸಿಕೊಳ್ಳಬೇಕು. ಒಕ್ಕೂಟ ಯಾವ ಪಕ್ಷಕ್ಕೂ ಬೆಂಬಲ ನೀಡುವದಿಲ್ಲ. ಪಕ್ಷ, ರಾಜಕಾರಣ ಎಲ್ಲವೂ ಅವರವರ ವೈಯಕ್ತಿಕ ವಿಚಾರ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಕಳೆದ ಸಾಲಿನ ವರದಿ ಮಂಡಿಸಿದ ಒಕ್ಕೂಟದ ಅಧ್ಯಕ್ಷ ಮುದ್ದಯ್ಯ, ಅಹಿಂದಾ ಒಕ್ಕೂಟದಲ್ಲಿ ಎಲ್ಲಾ ಸಮುದಾಯಗಳ ಮುಖಂಡರು ಸಕ್ರೀಯರಾದಲ್ಲಿ ಮಾತ್ರ ಯಶಸ್ಸು ಕಾಣಸಲು ಸಾಧ್ಯ ಎಂದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಕಾರ್ಯಾಧ್ಯಕ್ಷ ಬೇಬಿ ಮ್ಯಾಥ್ಯು, ಮುಂದಿನ ದಿನಗಳಲ್ಲೂ ಒಕ್ಕೂಟದ ವತಿಯಿಂದ ಅಹಿಂದಾ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು, ಹೋರಾಟಗಳನ್ನು ಹಮ್ಮಿಕೊಳ್ಳ ಲಾಗುತ್ತದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಸಮಾಜಗಳ ಮುಖಂಡರು ಒಕ್ಕೂಟದ ಮುಂದಿನ ಕಾರ್ಯಯೋಜನೆಗಳ ಕುರಿತು ಸಲಹೆ ಸೂಚನೆ ನೀಡಿದರು. ಹಾಗೂ ತಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಒಕ್ಕೂಟದ ಗಮನಕ್ಕೆ ತಂದರು.