ಮಡಿಕೇರಿ, ಫೆ. 11: ಕೊಡಗು ಜಿಲ್ಲೆಯನ್ನು ಗ್ರಾಮೀಣ ಭಾಗಗಳಿಗೆ ಒಮ್ಮೆಯೂ ತಿರುಗಿ ನೋಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ನಿವಾಸಿಗಳು, ಮೊಬೈಲ್‍ನಂತಹ ಆಧುನಿಕ ತಂತ್ರಜ್ಞಾನ ಬಳಕೆಯತ್ತ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಟೀಕಿಸಿದ್ದಾರೆ.

ಕೊಡಗಿನ ಪುಷ್ಪಗಿರಿ ತಪ್ಪಲು ಶ್ರೇಣಿ, ತಲಕಾವೇರಿ-ಭಾಗಮಂಡಲ, ಕುಂಜಿಲ-ಕಕ್ಕಬೆ, ದಕ್ಷಿಣ ಕೊಡಗಿನ ಬಿರುನಾಣಿಯಂತಹ ಗ್ರಾಮೀಣ ಪ್ರದೇಶಗಳಿಂದ ಉತ್ತರ ಕೊಡಗಿನ ಗಾಳಿಬೀಡು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಇಂದಿಗೂ ಮೊಬೈಲ್ ಟವರ್ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಗ್ರಾಮೀಣ ಜನತೆ ನಿತ್ಯ ಬವಣೆ ಪಡುವಂತಾಗಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಓರ್ವ ಜವಾಬ್ದಾರಿಯುತ ಸಂಸದರಾಗಿ ದೂರವಾಣಿ ಸಲಹಾ ಸಮಿತಿ ಕೂಡ ರಚಿಸದೆ, ಕೇವಲ ಮೈಸೂರಿಗೆ ಸೀಮಿತ ಸಮಿತಿ ರಚಿಸಿಕೊಂಡು ತಮ್ಮ ಮೂಗಿನ ನೇರಕ್ಕೆ ಕೆಲಸ ನಿರ್ವಹಿಸುತ್ತಿರುವ ಪ್ರತಾಪ್ ಸಿಂಹ, ಚುನಾವಣೆಯಲ್ಲಿ ಗೆದ್ದು ಮೂರು ವರ್ಷ ಕಳೆದರೂ ಒಮ್ಮೆಯೂ ಇತ್ತ ತಿರುಗಿ ನೋಡಿಲ್ಲವೆಂದು ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಚುನಾಯಿತ ಬಿಜೆಪಿ ಸದಸ್ಯರೇ ಹೆಸರು ಹೇಳಲಿಚ್ಛಿಸದೆ ಆಕ್ರೋಶ ಹೊರಗೆಡವಿದ್ದಾರೆ.

ಮುಂಬರಲಿರುವ ಚುನಾವಣೆಯಲ್ಲಿ ಸಂಸದರ ಕಾರ್ಯವೈಖರಿಯಿಂದ ವಿಧಾನಸಭಾ ಆಯ್ಕೆ ಪ್ರಕ್ರಿಯೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಬೊಟ್ಟು ಮಾಡಿರುವ ಪ್ರಮುಖರು, ಗ್ರಾಮೀಣ ರಸ್ತೆ, ಮೊಬೈಲ್ ಟವರ್ ಒದಗಿಸುವಲ್ಲಿ ಕನಿಷ್ಟ ಕಾಳಜಿ ತೋರಿಲ್ಲವೆಂದು ಬಹಿರಂಗಗೊಳಿಸಿದ್ದಾರೆ.

ಗ್ರಾಮೀಣ ಭಾಗಕ್ಕೆ ಮೊಬೈಲ್ ಟವರ್‍ಗಾಗಿ ಎರಡು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ, ಹಾಲೀ ಸಂಸದರು ಪ್ರತಿಷ್ಠಿತ ಉದ್ದಿಮೆಗಳನ್ನು ಗಮನದಲ್ಲಿರಿಸಿಕೊಂಡು ಮೊಬೈಲ್ ಟವರ್ ಕಲ್ಪಿಸಲು ಉತ್ಸುಕತೆ ತೋರಿರುವದು ಇವರ ಕಾರ್ಯವೈಖರಿಗೆ ಸಾಕ್ಷಿಯೆಂದು ಗ್ರಾಮೀಣ ಪ್ರತಿನಿಧಿಗಳು ಬಹಿರಂಗ ಉದಾಹರಣೆ ನೀಡಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಬಳಿ ಮೊಬೈಲ್ ಟವರ್‍ಗೆ ಮಂಜೂರಾತಿ ನೀಡಿರುವ ಸಂಸದರು, ಕೇವಲ 1 ಕಿ.ಮೀ. ಕೂಡ ಅಂತರವಿಲ್ಲದ ಪ್ರತಿಷ್ಠಿತ ರೆಸಾರ್ಟ್‍ನಲ್ಲಿ ಮತ್ತೊಂದು ಟವರ್‍ಗೆ ಅವಕಾಶ ಕಲ್ಪಿಸುವದರೊಂದಿಗೆ ಬಿಜೆಪಿ ಸರಕಾರವು ‘ಕಾರ್ಪೋರೇಟ್’ ವಲಯಕ್ಕೆ ಸೀಮಿತವಾಗಿದೆ ಎಂಬ ಟೀಕೆಗೆ ಗ್ರಾಸ ಮಾಡಿಕೊಟ್ಟಿದೆ ಎಂದು ಟೀಕಿಸಿದ್ದಾರೆ.

ಈ ದಿಸೆಯಲ್ಲಿ ಬಿಜೆಪಿ ಮುಖಂಡರು ಮತ್ತು ಜಿಲ್ಲೆಯ ಶಾಸಕದ್ವಯರ ಸಹಿತ ಮೇಲ್ಮನೆ ಸದಸ್ಯರು ಹಾಗೂ ಇತರ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಗ್ರಾಮೀಣ ಜನತೆಯ ಸಮಸ್ಯೆಯತ್ತ ಸಂಸದರ ಗಮನ ಸೆಳೆಯಬೇಕೆಂದು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ಇಂದು ಸಭೆ: ಕೊಡಗು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯು ತಾ. 12 ರಂದು (ಇಂದು) ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2.30 ಗಂಟೆಗೆ ಮಡಿಕೇರಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ಗ್ರಾಮೀಣ ಪ್ರತಿನಿಧಿಗಳು ಸಂಸದರ ಗಮನ ಸೆಳೆಯಲು ಮುಂದಾಗಲಿದ್ದಾರೆ ಎಂದು ಗೊತ್ತಾಗಿದೆ.