ಮಡಿಕೇರಿ, ಫೆ. 11: ಲಯನ್ಸ್ ಕ್ಲಬ್ ಹಾಗೂ ಮಂಗಳೂರು ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಗರದ ಲಯನ್ಸ್ ಕ್ಲಬ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷ ಬೊಳ್ಳಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಆರೋಗ್ಯದ ಬಗ್ಗೆ ನಾವುಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಲಹೆಯಿತ್ತರು.

ಮಂಗಳೂರು ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತ್ ಪೈ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿಕಿತ್ಸಾ ವೆಚ್ಚಕ್ಕೆ ಹೆದರಿ ಕೆಲವರು ತಮ್ಮ ರೋಗಕ್ಕೆ ಚಿಕಿತ್ಸೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರ ಉತ್ತಮ ಆರೋಗ್ಯ ಮತ್ತು ಚಿಕಿತ್ಸೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಉಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರು.

ಮಂಗಳೂರು ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಸಯ್ಯದ್ ಮಹಮ್ಮದ್ ಹೃದಯವನ್ನು ಹೇಗೆ ಉತ್ತಮವಾಗಿಟ್ಟುಕೊಳ್ಳಬೇಕು, ಹೃದಯಕ್ಕೆ ಸಂಬಂಧಿಸಿದಂತೆ ಎದುರಾಗುವ ತೊಂದರೆಗಳು ಯಾವುದು ಮತ್ತು ಅವುಗಳನ್ನು ಹೇಗೆ ಎದುರಿಸಿ ಜೀವನ ನಡೆಸಬೇಕು ಎಂಬವದರ ಬಗ್ಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ ಎದೆನೋವು, ಸ್ಥೂಲಕಾಯ, ಅತಿಯಾದ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಸಮಸ್ಯೆ ಮೊದಲಾದ ಪರೀಕ್ಷೆಗಳನ್ನು ನಡೆಸಲಾಯಿತು. ಸುಮಾರು 70ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಶಿಬಿರದಲ್ಲಿ ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್, ಲಯನೆಸ್ ಅಧ್ಯಕ್ಷರಾದ ಕವಿತಾ ಬೊಳ್ಳಪ್ಪ, ಕಾರ್ಯದರ್ಶಿ ಮಧುಕರ್ ಮತ್ತಿತರರಿದ್ದರು.