ಶನಿವಾರಸಂತೆ, ಫೆ. 11: ಶನಿವಾರಸಂತೆಯಿಂದ 12 ಕಿ.ಮೀ. ದೂರದ ಮಾಲಂಬಿ ಬೆಟ್ಟದಲ್ಲಿ ಇರುವ ಮಳೆಮಲ್ಲೇಶ್ವರ ದೇವಾಲಯದಲ್ಲಿ ತಾ. 13 ರಂದು ಮಹಾಶಿವರಾತ್ರಿಗೆ ಸಜ್ಜಾಗಿದೆ. ಕೊಡಗಿನ ಏಳು ಸಾವಿರ ಸೀಮೆಬೆಟ್ಟ ಸಾಲುಗಳಲ್ಲಿ ಮಾಲಂಬಿ ಬೆಟ್ಟ 3ನೇ ಅತಿ ಎತ್ತರದ ಬೆಟ್ಟವಾಗಿದೆ.

ಕೊಡಗಿನ ಬೆಡಗಿನ ಬೆಟ್ಟಗಳ ಸಾಲಿನಲ್ಲಿ ಬರುವ ಈ ಬೆಟ್ಟ ಐತಿಹಾಸಿಕ ಮಹತ್ವ ಹೊಂದಿದೆ. ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟ ಬಿಟ್ಟರೆ ಮಾಲಂಬಿ ಬೆಟ್ಟವೇ ಎರಡನೇ ಅತಿ ಎತ್ತರದ ಬೆಟ್ಟ. ಹೀಗಾಗಿ ಈ ಬೆಟ್ಟ ಶಿವರಾತ್ರಿಗೆ ಮಾತ್ರವಲ್ಲ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವ ಪಡೆದಿದ್ದು, ಚಾರಣಿಗರಿಗೆ ಅತ್ಯಂತ ಪ್ರಿಯವಾಗಿದೆ.

ಮಾಲಂಬಿ ಬೆಟ್ಟದ ಎತ್ತರ 5,494 ಅಡಿ. ಇದರ ತುದಿಗೆ ಹೋಗಿ ನಿಂತರೆ ಸುತ್ತ ಮುತ್ತಲಿನ ಸಿರಿ ಹಸಿರು ಕಣ್ಮನ ತಣಿಸುತ್ತದೆ. ಅಂಕು ಡೊಂಕಾಗಿ ಬೆಳೆದು ನಿಂತಿರುವ ಕಾಫಿ ತೋಟಗಳ ಐಸಿರಿಮನ ಸೆಳೆಯುತ್ತದೆ. ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಮಳೆಮಲ್ಲೇಶ್ವರನ ದೇವಾಲಯ ಬೆಟ್ಟಕ್ಕೆ ಕಿರೀಟವಿಟ್ಟಂತೆ ಕಾಣುತ್ತದೆ.

ಮಳೆಮಲ್ಲೇಶ್ವರ ದೇವಾಲಯ ಹಳೆಯ ಕಾಲದ್ದು. ಬ್ರಿಟಿಷರ ಕಾಲದಿಂದಲೇ 1830 ರಿಂದ ಮಾಲಂಬಿ ಬೆಟ್ಟದ ಮೇಲೆ ಮಳೆಮಲ್ಲೇಶ್ವರನಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ವೀರಶೈವ ರಾಜರು ಕೊಡಗನ್ನು ಆಳಿದ ಕಾರಣ ಶಿವನ ಆರಾಧನೆಯೇ ಜಿಲ್ಲೆಯಲ್ಲಿ ಅಧಿಕವಾಗಿದೆ. ಮಳೆಮಲ್ಲೇಶ್ವರ ಗುಡಿಯೂ ಇದರಲ್ಲಿ ಒಂದು.

ಹಿಂದೊಮ್ಮೆ ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿಕೊಂಡಾಗ ಹಾಸನ ಜಿಲ್ಲೆಯ ಅರಕಲಗೂಡಿನಿಂದ ಶಿವನು ಮಲ್ಲೇಶ್ವರಕ್ಕೆ ಬಂದು ನೆಲೆಸಿದ ಎಂಬದು ಪುರಾಣ ಕಥೆ. ಆಗ ಮಳೆಯಾಗಿದ್ದರಿಂದ ಈ ದೇವರಿಗೆ ‘ಮಳೆಮಲ್ಲೇಶ್ವರ’ ಎಂಬ ಹೆಸರು ಬಂದಿತೆಂಬದು ಪ್ರತೀತ.

ಪ್ರತಿ ವರ್ಷ ಮಹಾಶಿವರಾತ್ರಿಯಂದು ಭಕ್ತರು ಬಂದು ಮುಂಜಾನೆಯಿಂದಲೇ ಬೆಟ್ಟವೇರುವದು ವಿಶೇಷ. ಬೆಟ್ಟ ಇಳಿದು ಬರುತ್ತಿರುವಂತೆ ತುಂತುರು ಮಳೆ ಸುರಿಯುತ್ತದೆ. ಮಾಲಂಬಿ ಬೆಟ್ಟದಲ್ಲಿ ತಾ. 13 ರಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆಯಲಿವೆ.

-ನರೇಶ್ವಂದ್ರ