ಸೋಮವಾರಪೇಟೆ, ಫೆ. 14: ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರೋವರ್ಸ್ ತಂಡದ ಸೈಕಲ್ ಜಾಥಾವನ್ನು ಸೋಮವಾರಪೇಟೆ ತಾಲೂಕು ಸಂಸ್ಥೆ ಪದಾಧಿಕಾರಿಗಳು ಸ್ವಾಗತಿಸಿದರು.

ಡಾ. ಅಬ್ದುಲ್ ಕಲಾಂ ಕ್ರೀವ್ಸ್ ತಂಡದ ಸೈಕಲ್ ಜಾಥಾವು ವಿದ್ಯಾರ್ಥಿ ರಾಜೇಶ್ ಸಾರಥ್ಯದಲ್ಲಿ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸೋಮವಾರಪೇಟೆ ಸಂಸ್ಥೆಯ ಅಧ್ಯಕ್ಷ ಬಿ.ಎ. ಭಾಸ್ಕರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್ ಸೇರಿದಂತೆ ಪ್ರಮುಖರು ಸ್ವಾಗತಿಸಿದರು. ಪಟ್ಟಣದ ಮಹಾತ್ಮಗಾಂಧಿ ಪ್ರತಿಮೆಯ ಬಳಿ ನೆರೆದಿದ್ದ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಹಾಗೂ ತಾವು ಹಮ್ಮಿಕೊಂಡಿರುವ ಸೈಕಲ್ ಜಾಥಾದ ಬಗ್ಗೆ ಮಾಹಿತಿಯನ್ನು ತಂಡದಲ್ಲಿದ್ದ ವಿಶ್ವಜಿತ್ ವಿ. ರಾಥೋಡ್ ನೀಡಿದರು. ಮೈಸೂರು, ಹಾಸನ, ಕೊಡಗು ಜಿಲ್ಲೆಯಾದ್ಯಂತ ತಮ್ಮ ಜಾಥಾವು ಸಾಗುತ್ತಿದ್ದು, ಅಲ್ಲಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸೈಕಲ್ ಜಾಥಾದ ತಂಡದಲ್ಲಿ ವಿದ್ಯಾರ್ಥಿಗಳಾದ ಕೆ.ಜಿ. ಪ್ರದೀಪ್, ಹೆಚ್.ಆರ್. ರಾಕೇಶ್, ಎಸ್.ಎಸ್. ರಾಘು, ಬಿ.ಕೆ. ರವಿಕುಮಾರ್, ಕೆ.ಇ. ನಿತಿನ್ ಕುಮಾರ್, ಬಿ.ಎಲ್. ಶರತ್, ಎನ್.ಆರ್. ಯಶ್ವಂತ್ ಕುಮಾರ್ ಭಾಗವಹಿಸಿದ್ದಾರೆ.