ಮಡಿಕೇರಿ, ಫೆ. 15: ಆರೋಗ್ಯದ ಕಡೆ ಪ್ರತಿಯೊಬ್ಬರೂ ಗಮನಹರಿಸುವಂತಾಗಬೇಕು. ಆರೋಗ್ಯವಂತರಾಗಿದ್ದಲ್ಲಿ ಚಟುವಟಿಕೆಯಿಂದ ಇರಲು ಸಾಧ್ಯ. ಆದ್ದರಿಂದ ಆರೋಗ್ಯದ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕು ಎಂದು ಜಿ.ಪಂ. ಸಿ.ಇ.ಓ. ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವತಿಯಿಂದ ಮಾಹಿತಿ, ಶಿಕ್ಷಣ ಮತ್ತು ಸಹಭಾಗಿತ್ವ ಕಾರ್ಯಕ್ರಮದಡಿ ಅಂತರ ಇಲಾಖಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಕುರಿತು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಚ್.ಐ.ವಿ. ಸೋಂಕಿತರಿಗೆ ಸರಿಯಾದ ಮಾಹಿತಿ ನೀಡಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯ ಬಳಸಿಕೊಳ್ಳುವಂತೆ ತಿಳಿಸಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಜ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವದು ಎಲ್ಲರ ಕರ್ತವ್ಯ. ಆರೋಗ್ಯ ಸೇವೆ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಆದ್ದರಿಂದ ಪ್ರಾಥಮಿಕ ಕೇಂದ್ರ, ಗ್ರಾಮಸಭೆ, ತಾಲೂಕು ಕೇಂದ್ರಗಳಲ್ಲಿ ಅರಿವು ಮೂಡಿಸುತ್ತೇವೆ ಎಂದು ತಿಳಿಸಿದರು.

ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಹೆಚ್‍ಐವಿ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವಂತ ವೈರಾಣು. ಈ ವೈರಾಣು ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಹೆಚ್.ಐ.ವಿ ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವದರಿಂದ ಹೆಚ್.ಐ.ವಿ. ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲೂಣಿಸುವ ಮೂಲಕ, ಸಂಸ್ಕರಣೆ ಮಾಡದ ಸೂಜಿ-ಸಿರಂಜು ಬಳಸುವದರಿಂದ ಬರುತ್ತದೆ ಎಂದು ತಿಳಿಸಿದರು. ಹೆಚ್.ಐ.ವಿ. ಸೋಂಕಿತ ಮಹಿಳೆ ಗರ್ಭಧರಿಸಿದರೆ ಮಗುವಿಗೆ ಸೋಂಕು ತಗಲುವ ಸಾಧ್ಯತೆ ಇದೆ ಪಿಪಿಟಿಸಿಟಿ ಸೇವೆಯಿಂದ, ತಂದೆ, ತಾಯಿಯ ಮೂಲಕ ಮಗುವಿಗೆ ಸೋಂಕು ಹರಡುವದನ್ನು ತಡೆಗಟ್ಟಬಹುದು. ಹಾಗೆಯೇ ಎಲ್ಲಾ ಗರ್ಭಿಣಿಯರು ತಪ್ಪದೇ ಹೆಚ್.ಐ.ವಿ. ಸೋಂಕಿತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಗರ್ಭವತಿಯಾದ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಕೇಂದ್ರದಲ್ಲಿ ನೋಂದಣೆ ಮಾಡಿಸಿ, ಮೊದಲ ತ್ರೈಮಾಸಿಕ ಅವಧಿಯಲ್ಲಿ ಪರೀಕ್ಷೆ ಮಾಡಿಸಿ ಮಗುವನ್ನು ಹೆಚ್.ಐ.ವಿ.ಯಿಂದ ರಕ್ಷಿಸಿ. ಶೇ. 90 ರಷ್ಟು ಹೆಚ್.ಐ.ವಿ. ಸೋಂಕಿರುವವರು ತಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿದಿರಬೇಕು. ಶೇ. 90 ರಷ್ಟು ಸೋಂಕಿತರು ಎ.ಆರ್.ಟಿ. ಚಿಕಿತ್ಸೆ ಪಡೆದಿರಬೇಕು. 90 ರಷ್ಟು ಎ.ಆರ್.ಟಿ. ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ವೈರಲ್ ಲೋಡ್ ಪ್ರಮಾಣ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು

ಡಾ. ಶಿವಕುಮಾರ್ ಮಾತನಾಡಿ, ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣಾ ಬಹಳ ಮುಖ್ಯ ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶ ದಿನ ನಿತ್ಯವು ಆಹಾರದಲ್ಲಿ ಆಯೋಡಿನ್‍ಯುಕ್ತ ಉಪ್ಪನ್ನು ಬಳಸುವದರಿಂದ ಅಯೋಡಿನ್ ಕೊರತೆ ನಿವಾರಣೆ ಸಾಧ್ಯ ಎಂದು ತಿಳಿಸಿದರು. ಒಂದು ವರ್ಷದೊಳಗಿನ ಮಕ್ಕಳಿಗೆ 50 ಮೈಕ್ರೋಗ್ರಾಂ, ಆರು ವರ್ಷದೊಳಗಿನ ಮಕ್ಕಳಿಗೆ 90 ಮೈಕ್ರೋಗ್ರಾಂ, ಶಾಲಾ ವಯಸ್ಸಿನ ಮಕ್ಕಳಿಗೆ 120 ಮೈಕ್ರೋಗ್ರಾಂ, ಗರ್ಭಿಣಿ ಬಾಣಂತಿಯರಿಗೆ 200 ಮೈಕ್ರೋ ಗ್ರಾಂ, ವಯಸ್ಕರಿಗೆ 150 ಮೈಕ್ರೋಗ್ರಾಂ ಅಯೋಡಿನ್ ಅವಶ್ಯಕ ಎಂದು ತಿಳಿಸಿದರು. ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ನಿಲೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಮಚಂದ್ರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ರಾಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕಿ ಗೀತಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಗನಾಥ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಮ್ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಜಿಲ್ಲಾ ಏಡ್ಸ್ ಕಾರ್ಯಕ್ರಮ ಮೇಲ್ವಿಚಾರಕರಾದ ಸುನೀತಾ, ಕಮಲ, ಕಿರಣ್ ಇತರರು ಇದ್ದರು.