ಸೋಮವಾರಪೇಟೆ, ಫೆ. 15: ಸಮೀಪದ ಅಬ್ಬೂರುಕಟ್ಟೆಯಲ್ಲಿ ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಒಕ್ಕಲಿಗರ ಸಂಘದ ಉದ್ಘಾಟನೆ ಮತ್ತು ಗುರುವಂದನೆ ಕಾರ್ಯಕ್ರಮ ತಾ. 16 ರಂದು (ಇಂದು) ನೇರುಗಳಲೆ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ವಿನೋದ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಿಗ್ಗೆ 10 ಗಂಟೆಯಿಂದ ನೇರುಗಳಲೆ ಶಾಲಾ ಮೈದಾನದಲ್ಲಿ ಒಕ್ಕಲಿಗ ಕುಲ ಬಾಂಧವರಿಗೆ ವಿವಿಧ ಮನೋ ರಂಜನಾ ಕ್ರೀಡಾಕೂಟ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸಂಘದ ಅಧಿಕೃತ ಚಿಹ್ನೆ ಬಿಡುಗಡೆ ಮಾಡಲಾಗುವದು ಎಂದರು.

ಅಪರಾಹ್ನ 3 ಗಂಟೆಗೆ ಆದಿಚುಂಚನಗಿರಿ ಮಠಾಧೀಶರಾದ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳನ್ನು ಅಬ್ಬೂರುಕಟ್ಟೆಯ ಜಂಕ್ಷನ್‍ನಿಂದ ಶಾಲಾ ಮೈದಾನದ ವರೆಗೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಗುವದು. ಪೂರ್ಣಕುಂಭ ಸ್ವಾಗತದೊಂದಿಗೆ ಸುಗ್ಗಿ ಕುಣಿತ ತಂಡ ಸಹಿತ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸಂಘವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದು, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ನಂತರ ಗುರುವಂದನಾ ಕಾರ್ಯ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜೀ ಸಚಿವ ಬಿ.ಎ. ಜೀವಿಜಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಒಕ್ಕಲಿಗರ ಸಂಘದ ಸದಸ್ಯ ಹೆಚ್.ಕೆ. ಶೇಖರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಮಾಜಿ ತಾ.ಪಂ. ಅಧ್ಯಕ್ಷ ಅರೆಯೂರು ಜಯಣ್ಣ, ಕೆ.ಎಂ. ಲೋಕೇಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಒಕ್ಕಲಿಗರ ಸಂಘದ ಮೂಲಕ ಅಬ್ಬೂರುಕಟ್ಟೆಯಲ್ಲಿ ಸಮುದಾಯ ಭವನ, ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಕೆಂಪೇಗೌಡ, ಕುವೆಂಪು ಜನ್ಮ ದಿನಾಚರಣೆ ಸೇರಿದಂತೆ ಸೈನಿಕ ದಿನವನ್ನು ಸಂಘದ ವತಿಯಿಂದ ಆಚರಿಸಲಾಗುವದು. ಇದರೊಂದಿಗೆ ಒಕ್ಕಲಿಗ ಸಮುದಾಯದ ಸಂಸ್ಕøತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಂಘದ ಮೂಲಕ ಕೈಗೊಳ್ಳಲಾಗುವದು ಎಂದು ಬೋಜೇಗೌಡ ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಪಿ. ಸುರೇಶ್, ಸಂಘಟನಾ ಕಾರ್ಯದರ್ಶಿ ಎ.ಹೆಚ್. ತಿಮ್ಮಯ್ಯ, ಸಲಹೆಗಾರರಾದ ಹೆಚ್.ಕೆ. ಲೋಕೇಶ್, ಖಜಾಂಚಿ ಅಜಿತ್ ಕುಮಾರ್, ಬಸವರಾಜು, ಮಸಗೋಡು ಲೋಕೇಶ್ ಅವರುಗಳು ಉಪಸ್ಥಿತರಿದ್ದರು.