ಕುಶಾಲನಗರ, ಫೆ. 15: ಕುಶಾಲನಗರ ಒಕ್ಕಲಿಗರ ಯುವ ವೇದಿಕೆಯ ತೃತೀಯ ವಾರ್ಷಿಕೋತ್ಸವ, ರಾಷ್ಟ್ರಕವಿ ಕುವೆಂಪು ದಿನಾಚರಣೆ ಹಾಗೂ ಬಿಜಿಎಸ್ ವೃತ್ತದ ಉದ್ಘಾಟನೆ ಕಾರ್ಯಕ್ರಮ ತಾ. 16 ರಂದು (ಇಂದು) ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಕುಶಾಲನಗರ ಸೋಮೇಶ್ವರ ದೇವಾಲಯದ ಬಳಿ ನೂತನವಾಗಿ ನಿರ್ಮಿಸಿರುವ ಬಿಜಿಎಸ್ ವೃತ್ತದ ಉದ್ಘಾಟನೆ ನಡೆಯಲಿದೆ. ನಂತರ ವಿವಿಧ ಕಲಾ ತಂಡಗಳೊಂದಿಗೆ ಬಿಜಿಎಸ್ ವೃತ್ತದಿಂದ ರೈತ ಸಹಕಾರ ಭವನದವರೆಗೆ ಮೆರವಣಿಗೆ ನಡೆಯಲಿದೆ ಎಂದರು.

ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ಕೊಡಗು ಜಿಲ್ಲಾ ಶಾಖಾ ಮಠದ ಶ್ರೀ ಶಂಭುನಾಥ ಮಹಾಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ. ಜೀವಿಜಯ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವೇದಿಕೆ ಉಪಾಧ್ಯಕ್ಷ ಜಿ.ಬಿ. ಜಗದೀಶ್, ಪ್ರಧಾನ ಕಾರ್ಯದರ್ಶಿ ಎಂ.ಸಿ. ಅನಿಲ್ ಕುಮಾರ್, ಖಜಾಂಚಿ ವಿ.ಬಿ. ಜೈರಾಜ್, ನಿರ್ದೇಶಕರಾದ ಎಂ.ಕೆ. ದಿನೇಶ್, ಎಂ.ಕೆ. ಮಂಜುನಾಥ್ ಇದ್ದರು.