ನಾಪೋಕ್ಲು, ಫೆ. 15: ಶ್ರೀಮೂಲ ಕಾವೇರಿ ಬೈವಾಡು ಸಮಿತಿ ಪಾರಾಣೆ ಕೇಂದ್ರ ಇದರ ನಾಪೋಕ್ಲು ಶಾಖೆಯ ವತಿಯಿಂದ ಶಿವರಾತ್ರಿ ದಿನದಂದು ಪ್ರತಿ ವರ್ಷದಂತೆ ಇರುಮುಡಿ ಬೈವಾಡು ಕಾರ್ಯಕ್ರಮ ಜರುಗಿತು.

ಸ್ಥಳೀಯ ಹಳೇ ತಾಲೂಕು ಶ್ರೀ ಭಗವತಿ ದೇವಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಂಗವಾಗಿ ಸೋಮವಾರ ಸಂಜೆ ಶ್ರೀ ಭಗವತಿ ದೇವಾಲಯದ ಸಭಾಂಗಣದಲ್ಲಿ ಸಂಪ್ರದಾಯದಂತೆ ಇರುಮುಡಿ ಕಟ್ಟು ತುಂಬಿಸುವದು ನಡೆಯಿತು. ಮಂಗಳವಾರ ಬೆಳಿಗ್ಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವಾಲಯದಿಂದ ದೇವರ ಬೈವಾಡು ಜಾತ್ರೆ ಪ್ರಾರಂಭಗೊಂಡು ಕಕ್ಕಬೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯಲ್ಲಿ ಸ್ನಾನದ ಬಳಿಕ ದೇವಾಲಯದ ಗೌರವ ಸ್ವಾಗತದೊಂದಿಗೆ ಸನ್ನಿಧಿಗೆ ತೆರಳಿ ಪತ್ತಾಯದಲ್ಲಿ (ಅಕ್ಷಯ ಪಾತ್ರೆ) ಅಕ್ಕಿ ಹಾಕಿ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ತಲಕಾವೇರಿಗೆ ಜಾತ್ರೆ ತೆರಳಿತು. ಅಲ್ಲಿ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಇರುಮುಡಿ ಒಪ್ಪಿಸಿ ಸಾಂಪ್ರದಾಯಿಕ ಆಚರಣೆ ಮಾಡಿ ಧಾರಣ ಮಾಲೆಯನ್ನು ಗುರುಸ್ವಾಮಿ ತೆಗೆದು ವಿಶೇಷ ಪೂಜೆ ಸಲ್ಲಿಸಿ ತಮ್ಮ ಮನೆಯಲ್ಲಿ ಪ್ರಸಾದ ರೂಪದಲ್ಲಿ ಅಕ್ಕಿಯೊಂದಿಗೆ ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ಭಕ್ತರು ಬೈವಾಡು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾವೇರಿ ಮಾತೆಯ ದರ್ಶನ ಪಡೆದು ತೀರ್ಥರೂಪಿಣಿ ಅನ್ನದಾತೆಯೆಂದು ಪ್ರಾತಿನಿಧ್ಯ ಇರುವ ಶ್ರೀ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವದರಿಂದ ಸೌಭಾಗ್ಯವಂತರಾಗುವ ಆಶೀರ್ವಾದ ಸಿಗಲಿದೆ ಎಂದು ಗುರುಸ್ವಾಮಿ ಕೇಲೇಟಿರ ನಾಣಯ್ಯ ಹೇಳಿದರು. ಬೈವಾಡು ನಾಪೋಕ್ಲು ಶಾಖೆಯ ಅಧ್ಯಕ್ಷ ಪಾಡಿಯಮ್ಮನ ಮುತ್ತಮ್ಮಯ್ಯ, ಕಾರ್ಯದರ್ಶಿ ಬೊಟ್ಟೋಳಂಡ ಗಣೇಶ್, ಗುರುಸ್ವಾಮಿ ಕೇಲೇಟಿರ ನಾಣಯ್ಯ, ಸಮಿತಿ ಸದಸ್ಯರಾದ ಚಿತ್ರಾ ನಾಣಯ್ಯ, ಕಂಗಾಂಡ ಭೀಮಯ್ಯ, ಕಮಲ ಗಣೇಶ್, ಪ್ರಭು ಯನ್., ಕೆ.ಸಿ. ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.

- ದುಗ್ಗಳ