ಸಿದ್ದಾಪುರ, ಫೆ. 15: ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ದಾಂಧಲೆ ನಡೆಸಿ ನೂರಾರು ಅಡಿಕೆ ಮರಗಳು, ಕರಿಮೆಣಸು ಬಳ್ಳಿಗಳನ್ನು ಧ್ವಂಸ ಮಾಡಿ ನಷ್ಟಗೊಳಿಸಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಚೌಡ್‍ರಂಗಿ ಕಾಫಿ ತೋಟದಲ್ಲಿ ನಡೆದಿದೆ. ಬುಧವಾರದಂದು ರಾತ್ರಿ 15ಕ್ಕೂ ಅಧಿಕ ಕಾಡಾನೆಗಳ ಹಿಂಡು ಮರಿಯಾನೆಗಳೊಂದಿಗೆ ಕಾಫಿ ತೋಟದೊಳಗೆ ಲಗ್ಗೆ ಇಟ್ಟು ಕಾಫಿ ತೋಟದಲ್ಲಿದ್ದ 100ಕ್ಕೂ ಅಧಿಕ ಫಸಲಿಗೆ ಬಂದಿರುವ ಅಡಿಕೆ ಮರಗಳನ್ನು ನೆಲಕ್ಕೆ ಉರುಳಿಸಿ ಧ್ವಂಸಗೊಳಿಸಿವೆ. ಇದಲ್ಲದೇ ಫಸಲಿರುವ 150ಕ್ಕೂ ಅಧಿಕ ಕರಿಮೆಣಸು ಬಳ್ಳಿಗಳಿರುವ ಮರಗಳನ್ನು ಎಳೆದು ಹಾಕಿ ಧ್ವಂಸಗೊಳಿಸಿ ನಾಶಪಡಿಸಿವೆ. ತೋಟದೊಳಗೆ ದಾಂಧಲೆ ನಡೆಸಿದ ಪರಿಣಾಮ ತೋಟವು ಮೈದಾನದಂತಾಗಿದೆ. ಅಂದಾಜು ರೂ. 5 ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆಂದು ಕಾಫಿ ತೋಟದ ಮಾಲೀಕ ಮಂಡೇಪಂಡ ಮುತ್ತಣ್ಣ ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ತಿಳಿಸಿದರು. ಕಾಡಾನೆಗಳ ಹಿಂಡು ರಾತ್ರಿ ಪೂರ್ತಿ ತೋಟದ ಒಳಗೆ ನುಸುಳಿ ಮನಬಂದಂತೆ ದಾಂಧಲೆ ನಡೆಸಿದ್ದು, ಅಡಿಕೆ ಗಿಡಗಳು, ಕರಿಮೆಣಸು ಬಳ್ಳಿಗಳು ಹಾಗೂ ಕಾಫಿ ಬೆಳೆಗಳು ಧ್ವಂಸಗೊಂಡು ನಾಶವಾಗಿವೆ. ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಕಾಫಿ ತೋಟದ ಮಾಲೀಕರು ಹಾಗೂ ಕಾರ್ಮಿಕರ ಜೀವನ ದುಸ್ತರವಾಗಿದೆ. ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಭಯ ಪಡುತ್ತಿದ್ದಾರೆ. ಕಾಡಾನೆಗಳ ಉಪಟಳದಿಂದಾಗಿ ಕೃಷಿ ಹಾಗೂ ಬೆಳೆಯನ್ನೇ ಅವಲಂಬಿಸಿಕೊಂಡಿರುವ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಾಕಿಂಗ್ ತೆರಳಲು ಭಯ..!!
ಚೌಡ್‍ರಂಗಿ ಕಾಫಿ ತೋಟದ ಮಾಲೀಕ 103 ವರ್ಷ ಪ್ರಾಯದ ಶತಾಯುಸಿ ಎಂ.ಬಿ. ಚಿಣ್ಣಪ್ಪ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ ತನ್ನ ಜೀವನದಲ್ಲಿ ಇಷ್ಟೊಂದು ಕಾಡಾನೆಗಳ ಹಾವಳಿಯನ್ನು ತಾನು ಕಂಡಿರುವದಿಲ್ಲ. ತಾನು ದಿನ ನಿತ್ಯ ಮನೆಯ ಸುತ್ತಲು ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್ ತೆರಳುತ್ತೇನೆ. ಅದರೆ ಇದೀಗ ಕಾಡಾನೆಗಳ ಹಾವಳಿಯಿಂದಾಗಿ ಮನೆಯಿಂದ ಹೊರಹೋಗಲು ಭಯವಾಗುತ್ತಿದೆ ಎಂದು ಆತಂಕ ತೋಡಿಕೊಂಡರು. ಖಾಸಗಿ ಸಂಸ್ಥೆಗಳಿಗೆ ಸೇರಿದ ಕಾಫಿ ತೋಟಗಳ ಸುತ್ತಲು ಸೋಲಾರ್ ವಿದ್ಯುತ್ ಅಳವಡಿಸುವಂತೆ ಒತ್ತಾಯಿಸಿದ ಅವರು, ಕಾಡಾನೆಗಳಿಗೆ ಅರಣ್ಯದೊಳಗೆ ಆಹಾರ ಹಾಗೂ ನೀರಿನ ಸೌಲಭ್ಯ ಇಲ್ಲದ ಹಿನೆÀ್ನಲೆಯಲ್ಲಿ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿವೆ. ಸರ್ಕಾರವು ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕು. ಕಾಡಾನೆಗಳನ್ನು ಓಡಿಸುವದರಿಂದ ಯಾವದೇ ಪ್ರಯೋಜನ ಇಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
-ಚಿತ್ರ ವರದಿ ವಾಸು