ಮಡಿಕೇರಿ, ಫೆ.15 : ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯ ನಿವೇಶನಗಳನ್ನು ಹರಾಜು ಮಾಡಲು ಮುಂದಾಗಿರುವ ಜಿಲ್ಲಾಡಳಿತ ಕ್ರಮ ಕಾನೂನು ಬಾಹಿರವಾಗಿದ್ದು, ಇದನ್ನು ಕೈಬಿಟ್ಟು, ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಅರ್ಹ ಬಡ ಕುಟುಂಬದ ಫಲಾನುಭವಿಗಳಿಗೆ ವಿತರಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರದ ಗುಂಡೂರಾವ್ ಬಡಾವಣೆ ನಿವೇಶನ ವಂಚಿತರ ಹೋರಾಟ ಸಮಿತಿ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರಾದ ಕೆ.ಎಸ್.ನಾಗೇಶ್ ಬಡಾವಣೆಯ ನಿವೇಶನಗಳನ್ನು ತಾ.27ರಂದು ಹರಾಜು ಮಾಡುವದಾಗಿ ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಶಾಲನಗರದ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಇತರ ಎಲ್ಲಾ ಜನಾಂಗದ ನಿವೇಶನ ರಹಿತರಿಗೆ ನಿವೇಶನ ಹಂಚುವ ಸಲುವಾಗಿ ಬೈಚನಹಳ್ಳಿ ಗ್ರಾಮದಲ್ಲಿ ಸುಮಾರು 43 ಎಕರೆ ಜಾಗವನ್ನು ಮೀಸಲಿರಿಸಿದ್ದರು. ಅಲ್ಲದೆ ಈ ಉದ್ದೇಶಕ್ಕಾಗಿ ಕೇಂದ್ರ ಸರಕಾರದ ಸಮಗ್ರ ಪಟ್ಟಣ ಅಭಿವೃದ್ಧಿ ಯೋಜನೆಯಡಿ 1981ರ ಮಾ.23ರಂದು ಕುಶಾಲನಗರಕ್ಕೆ 79.80 ಲಕ್ಷ ರೂ.ಗಳನ್ನು ಮಂಜೂರು ಮಾಡಿಸಿದ್ದರು. ಆದರೆ ಈ ಜಾಗದಲ್ಲಿ ಕೆಲವೊಂದು ಜಮೀನಿನ ಮಾಲೀಕರು ಜಮೀನು ಬಿಟ್ಟು ಕೊಡದೇ ಇದ್ದುದರಿಂದ 1979ರಲ್ಲಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿ ಕುಶಾಲನಗರದ ಮನೆ ಮತ್ತು ನಿವೇಶನ ಇಲ್ಲದವರಿಗೆ ನಿವೇಶನ ಸಲುವಾಗಿ ಕೆಲವೊಂದು ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು.
ಈ ಭೂ ಸ್ವಾಧೀನವನ್ನು ಕೆ.ಎ.ಎಲ್.ಫಾರ್ ಗ್ರ್ಯಾಂಟ್ ಆಫ್ ಹೌಸ್ ಸೈಟ್ಸ್ ಆಕ್ಟ್ 1972ರ ಅನ್ವಯ ಮಾಡಿಕೊಳ್ಳಲಾಗಿದ್ದು, ಈ ರೀತಿ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಉದ್ದೇಶಿತ ಯೋಜನೆಗಳಿಗೆ ಮಾತ್ರ ಬಳಸಿಕೊಳ್ಳಬಹುದಾಗಿದ್ದು, ಅದನ್ನು ಹರಾಜು ಮಾಡುವಂತಿಲ್ಲ ಎಂದು ವಿವರಿಸಿದರು. ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿಯು ಇದೀಗ ನಿಯಮಬಾಹಿರವಾಗಿ ಆ ನಿವೇಶನಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡಲು ಮುಂದಾಗಿದ್ದು, ಆ ಮೂಲಕ ರಿಯಲ್ ಎಸ್ಟೇಟ್ ದಂಧೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಫೆ.2ರಂದು ಆದೇಶ ನೀಡಿ ಉದ್ದೇಶಿತ ಕಾಯ್ದೆಯಡಿ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕೆಂದು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಸಕ್ತ ಹೊರಡಿಸಿರುವ ಅಧಿಸೂಚನೆ ನಿಯಮ ಬಾಹಿರವಾಗಿದೆ ಎಂದು ಆರೋಪಿಸಿದರು. ತಾ.27ರಂದು ಜಿಲ್ಲಾಡಳಿತ ನಡೆಸಲಿರುವ ನಿವೇಶನಗಳ ಬಹಿರಂಗ ಹರಾಜಿನಲ್ಲಿ ನಿವೇಶನಗಳನ್ನು ಪಡೆದಲ್ಲಿ ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ ಎಂದರು. ಜಿಲ್ಲಾಡಳಿತ ಕೂಡ ತಾ.27ರ ಹರಾಜನ್ನು ಕೈಬಿಡಬೇಕೆಂದು ಮನವಿ ಮಾಡಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಈ ಹಿಂದೆ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯನ್ವಯ ಸುಮಾರು 896 ಮಂದಿ ನಿವೇಶನ ರಹಿತರನ್ನು ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದ್ದು, ಇದೀಗ ಈ ಸಂಖ್ಯೆ ಮತ್ತಷ್ಟು ಹೆಚ್ಚಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮತ್ತು ಜಿಲ್ಲಾಡಳಿತ ಗುಂಡೂರಾವ್ ಬಡಾವಣೆಯ ನಿವೇಶನಗಳನ್ನು ಮೂಲ ಕಾಯ್ದೆಯನ್ವಯ ನಿವೇಶನ ರಹಿತರಿಗೆ ವಿತರಿಸಲು ಕ್ರಮವಹಿಸಬೇಕು ಮತ್ತು ಬಹಿರಂಗ ಹರಾಜು ಮಾಡುವ ಮೂಲಕ ಹಣವಂತರ ಪಾಲಾಗುವದನ್ನು ತಡೆಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಹೆಚ್.ಟಿ. ವಸಂತ ಹಾಗೂ ವಿ.ಎಸ್. ಆನಂದಕುಮಾರ್ ಹಾಜರಿದ್ದರು.