ಮಡಿಕೇರಿ, ಫೆ. 15: ಕರ್ನಾಟಕ ಮತ್ತು ಗೋವಾ ರಾಜ್ಯಗಳ ಡೈರೆಕ್ಟರೇಟ್‍ರಿಂದ ಅತ್ಯುತ್ತಮ ಎನ್‍ಸಿಸಿ ಅಧಿಕಾರಿಗಳಿಗೆ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಘಟಕದ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ರಾಘವ್ ಬಿ ಇವರಿಗೆ ಇತ್ತೀಚೆಗೆ ಬೆಂಗಳೂರಿನ ಎಂಎನ್‍ಆರ್‍ಕೆವಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಗೋವಾ ಎನ್‍ಸಿಸಿ ಡೈರೆಕ್ಟರ್ ಆದ ಬ್ರಿಗೇಡಿಯರ್ ಡಿ.ಎಂ. ಪೂರ್ವಿನಾಥ್ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಮೇಜರ್ ರಾಘವ್ ಬಿ 1997 ರಿಂದ ಎನ್‍ಸಿಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2015 ರಲ್ಲಿ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಎನ್‍ಸಿಸಿ ಅಧಿಕಾರಿಗಳಿಗೆ ನಡೆಸುವ ತರಬೇತಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವನ್ನು ಕೂಡ ಪಡೆದಿದ್ದರು. ಇದಲ್ಲದೆ, ಗುಜರಾತಿನಲ್ಲಿ ನಡೆದ ರಾಷ್ಟ್ರಮಟ್ಟದ ಭಾವೈಕ್ಯತಾ ಶಿಬಿರದಲ್ಲಿ ಅತ್ಯುತ್ತಮ ಅಧಿಕಾರಿ ಪ್ರಶಸ್ತಿ ಗಳಿಸಿದ್ದರು.