ಕುಶಾಲನಗರ, ಫೆ. 15: ಶಾಸನಗಳ ಮೂಲಕ ಐತಿಹಾಸಿಕ, ಸಾಹಿತ್ಯ ಹಾಗೂ ರಾಜಕೀಯ ವಿದ್ಯಮಾನಗಳನ್ನು ತಿಳಿಯಲು ಸಾಧ್ಯವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಸೋಮಣ್ಣ ಹೇಳಿದರು. ಸಮೀಪದ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಆರಂಭಗೊಂಡ ಎರಡು ದಿನಗಳ ರಾಜ್ಯಮಟ್ಟದ ಸಂಶೋಧನಾ ಕಮ್ಮಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಡಿನ ಸಂಸ್ಕøತಿಯನ್ನು ಕಟ್ಟುವ ಕೆಲಸವನ್ನು ಸಂಶೋಧನೆಗಳು ಮಾಡುತ್ತ ಬಂದಿದೆ. ಭಾರತ ದೇಶಕ್ಕೆ ಬಂದ ವಿದೇಶಿಯರು ಸ್ಥಳೀಯ ಲಾವಣಿ ಗೀತೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಂಶೋಧನೆ ಆರಂಭಿಸಿದರು. 1850 ರ ಹಿಂದೆಯೇ ವಿದೇಶಿಯರಿಂದ ಸಂಶೋಧನೆಯನ್ನು ಕಲಿತ ಭಾರತೀಯರು ಕೂಡ ಮರೆಯಾಗಿರುವ ನೈಜಾಂಶವನ್ನು ಅನ್ವೇಷಣೆ ಮಾಡಿ ಸಂಶೋಧನೆ ಮಾಡಿದರು ಎಂದರು. ಮಂಗಳೂರು ವಿವಿ ಮಂಗಳ ಗಂಗೋತ್ರಿ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಅಭಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯಶೀಲತೆಯೊಂದಿಗೆ ಸಂಶೋಧನೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಂಶೋಧನ ಕುರಿತು ಆಸಕ್ತಿ ಬೆಳೆಸಲು ಇಂತಹ ಸಂಶೋಧನಾ ಕಮ್ಮಟಗಳು ಪೂರಕವಾಗಿವೆ ಎಂದರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಸ್. ಧರ್ಮ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಕನ್ನಡ ಅಧ್ಯಯನ ಕೇಂದ್ರ ಪ್ರಾಧ್ಯಾಪಕ ಡಾ. ಮಹಾಂತೇಶ್ ಪಾಟೀಲ, ಉಪನ್ಯಾಸಕರಾದ ಕೆ.ಎಸ್. ಶ್ರೀನಿವಾಸ್, ಜಮೀರ್ ಅಹಮ್ಮದ್, ಮಮತಾ, ತಾರಾ ಸಂತೋಷ್, ವೆಂಕಟೇಶ್, ರುದ್ರಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಕೇಶವಮೂರ್ತಿ ಇದ್ದರು.