ಮಡಿಕೇರಿ, ಫೆ. 15: ಜಿಲ್ಲಾ ಪಂಚಾಯಿತಿ ಸಭೆಗಳಿಗೆ ಗೈರು ಹಾಜರಾಗುತ್ತಿರುವ ಯಾವದೇ ಮಾಹಿತಿ ನೀಡದೇ ಇರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಮೇಲೆ ಕ್ರಮಕೈಗೊಳ್ಳುವ ಸಲುವಾಗಿ ಸರಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಜಿ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಅವರು, ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಬದಿ ನಿರ್ಮಿಸಲಾಗುತ್ತಿರುವ ಚರಂಡಿಗಳು ತೀರಾ ಕಳಪೆಯಾಗಿದೆ. ಅರ್ಧಂಬರ್ಧ ಚರಂಡಿ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಈ ಸಂದರ್ಭ ಕಾರ್ಯಪಾಲಕ ಅಭಿಯಂತರರು ಗೈರು ಹಾಜರಾಗಿದ್ದುದು ಕಂಡು ಬಂದಿತು. ಅವರ ಬದಲಿಗೆ ಸಭೆಗೆ ಬಂದಿದ್ದ ಅಭಿಯಂತರರಲ್ಲಿ ಮಾಹಿತಿ ಇರಲಿಲ್ಲ.

ಇದರಿಂದ ಅಸಮಾಧಾನಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶಶಿಸುಬ್ರಮಣಿ

(ಮೊದಲ ಪುಟದಿಂದ) ಹಾಗೂ ವಿಜು ಸುಬ್ರಮಣಿ ಅವರುಗಳು ಅಭಿಯಂತರರು ಸಭೆಗಳಿಗೆ ಬರುವದಿಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡುತ್ತಾರೆ. ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪ್ರಶಾಂತ್‍ಕುಮಾರ್ ಮಿಶ್ರ ಅವರು ಪ್ರತಿಕ್ರಿಯಿಸಿ, ಅಭಿಯಂತರ ರಿಂದ ಯಾವದೇ ಸೂಕ್ತವಾದ ಸ್ಪಂದನ ಸಿಗುತ್ತಿಲ್ಲ. ಕಳೆದ ಸಾಮಾನ್ಯ ಸಭೆಗೂ ಬಂದಿಲ್ಲ. ಇನ್ನು ಮುಂದಕ್ಕೆ ಸಭೆಗೆ ಬಾರದೇ ಇರುವವರು ಲಿಖಿತವಾಗಿ ಅನುಮತಿ ಪಡೆದುಕೊಳ್ಳಬೇಕೆಂದು ಹೇಳಿದರು. ಅಂತಿಮವಾಗಿ ಅಭಿಯಂತರರ ಮೇಲೆ ಕ್ರಮಕೈಗೊಳ್ಳುವ ಬಗ್ಗೆ ಶಿಫಾರಸು ಮಾಡಲು ತೀರ್ಮಾನ ಕೈಗೊಳ್ಳಲಾಯಿತು.

ವಸತಿ ಯೋಜನೆ

ಜಿಲ್ಲೆಯಲ್ಲಿ ವಸತಿ ಯೋಜನೆಯ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ತಾ.ಪಂ. ಇಓಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಬಿ.ಎ. ಹರೀಶ್ ಅವರು ಸೂಚನೆ ನೀಡಿದರು.

ಬಸವ, ಅಂಬೇಡ್ಕರ್, ಇಂದಿರಾ ಆವಾಸ್ ವಸತಿ ಯೋಜನೆಗಳು ಜಿಲ್ಲೆಯಲ್ಲಿ ಬಹಳ ಹಿಂದೆ ಇದ್ದು, ಬಡವರು ಗುಡಿಸಲಿನಲ್ಲಿ ವಾಸಮಾಡುತ್ತಿದ್ದಾರೆ. ಆದರೆ ಜಾಗ ಬಡವರು, ನಿರ್ಗತಿಕರ ಹೆಸರಿನಲ್ಲಿ ಇಲ್ಲದಿರುವದು, ವಸತಿ ಯೋಜನೆಯಡಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ, ಆದ್ದರಿಂದ ಈಗಾಗಲೇ ವಾಸ ಮಾಡುತ್ತಿರುವ ಜಾಗದಲ್ಲಿ ವಸತಿ ಕಲ್ಪಿಸಲು ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.

ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಪಿ. ಸುಬ್ರಮಣಿ ಅವರು ಈಗಾಗಲೇ ಬಡವರು ವಾಸ ಮಾಡುತ್ತಿರುವ ಜಾಗಕ್ಕೆ ದಾನ ಪತ್ರವಿದ್ದು, ಅದನ್ನು ಪರಿಗಣಿಸಿ ವಸತಿ ಯೋಜನೆ ಪ್ರಗತಿ ಸಾಧಿಸಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಪಿ.ಡಿ.ಓ. ಗಳಿಗೆ ನಿರ್ದೇಶನ ನೀಡಬೇಕಿದೆ ಎಂದು ಅವರು ಸಲಹೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರು ದಾನಪತ್ರವನ್ನು ರಕ್ತ ಸಂಬಂಧಿಗಳಾಗಿದ್ದಲ್ಲಿ ಮಾತ್ರ ಪರಿಗಣಿಸಲಾಗುತ್ತಿದೆ. ಇಲ್ಲದಿದ್ದರೆ ಅರ್.ಟಿ.ಸಿ. ದಾಖಲೆ ಇರಬೇಕಾಗುತ್ತದೆ. ಈ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗುವದು ಎಂದರು.

ಜಿಲ್ಲೆಯಲ್ಲಿ ಬಡವರು ಸಾಕಷ್ಟು ಮಂದಿ ಇದ್ದು, ನಿವೇಶನದ ದಾಖಲೆ ಇರುವುದಿಲ್ಲ. ಆದ್ದರಿಂದ ವಸತಿ ಯೋಜನೆ ಅನುಷ್ಠಾಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಸುಬ್ರಮಣಿ ಮನವಿ ಮಾಡಿದರು.

ವಸತಿ ಯೋಜನೆ ಪ್ರಗತಿ ಸಂಬಂಧಿಸಿದಂತೆ, ಮಾಹಿತಿ ನೀಡಿದ ಜಿ.ಪಂ.ಯೋಜನೆ ನಿರ್ದೇಶಕ ಸಿದ್ದಲಿಂಗಮೂರ್ತಿ ಅವರು ಪ್ರಸಕ್ತ ಸಾಲಿನಲ್ಲಿ ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ನಿವಾಸ ಯೋಜನೆ ಸೇರಿದಂತೆ 4406 ಗುರಿ ನಿಗದಿಯಾಗಿದ್ದು, ಅದರಲ್ಲಿ 1864 ಫಲಾನುಭವಿಗಳು ಆಯ್ಕೆಗೊಂಡಿದ್ದಾರೆ. ಇದರಲ್ಲಿ 14 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, 565 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. 1278 ಕಾಮಗಾರಿಗಳು ಆರಂಭಿಸಲು ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು.

ಮೂಕೊಂಡ ವಿಜು ಸುಬ್ರಮಣಿ ಅವರು ಜಿಲ್ಲೆಯ ಪ್ರವಾಸೋದ್ಯಮ ದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಆದರೆ ಪ್ರವಾಸಿ ಸ್ಥಳಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳು ಇಲ್ಲ. ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕಿದೆ ಎಂದು ಹೇಳಿದರು.

ಚೇಲಾವರ ಜಲಪಾತಕ್ಕೆ ತೆರಳಲು ರಸ್ತೆ ಇಲ್ಲ, ಇದರಿಂದ ಪ್ರವಾಸಿಗರಿಗೆ ತುಂಬಾ ತೊಂದರೆಯಾಗಿದೆ. ಈ ಸಂಬಂಧ ಸ್ಥಳೀಯ ಭೂ ಮಾಲೀಕರೊಂದಿಗೆ ಚರ್ಚಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಶಶಿ ಸುಬ್ರಮಣಿ ಅವರು ಸ್ಥಳೀಯ ಜಿ.ಪಂ. ಸದಸ್ಯರು, ಜನಪ್ರತಿನಿಧಿಗಳು ಹಾಗೂ ಭೂ ಮಾಲೀಕರನ್ನು ಆಹ್ವಾನಿಸಿ, ರಸ್ತೆ ಮಾಡುವ ನಿಟ್ಟಿನಲ್ಲಿ ಮನವರಿಕೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಚೇಲಾವರದಲ್ಲಿ ಸಭೆ ಆಹ್ವಾನಿಸುವಂತೆ ಸಲಹೆ ಮಾಡಿದರು.

ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್ ಅವರು ಚೇಲಾವರ ಜಲಪಾತ ಪ್ರವಾಸೋದ್ಯಮ ಪಟ್ಟಿಯಲ್ಲಿ ಇಲ್ಲ ಎಂದು ತಿಳಿಸಿದರು.

ಇದಕ್ಕೆ ಗರಂ ಆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರವಾಸೋದ್ಯಮ ಪಟ್ಟಿಯಲ್ಲಿ ಇಲ್ಲದಿದ್ದಲ್ಲಿ ಸರ್ಕಾರಿ ದಾಖಲೆಗಳಲ್ಲಿ ಹಾಗೂ ತಾವು ಮುದ್ರಣ ಮಾಡುವ ಪ್ರಕಟಣೆಗಳಲ್ಲಿ ಏಕೆ ಚೇಲಾವರ ಜಲಪಾತ ಛಾಯಾಚಿತ್ರ ಬಳಸುತ್ತಿದ್ದೀರ ಎಂದು ಪ್ರಶ್ನಿಸಿದರು. ಈ ರೀತಿ ಯಾದ್ದಲ್ಲಿ ನಿರ್ಬಂಧಿತ ಪ್ರದೇಶವೆಂದು ಮುಚ್ಚಿಬಿಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರವನ್ನು ಇದುವರೆಗೂ ತೆರೆದಿಲ್ಲ, ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿ ಮಾಡುವಂತಾಗಬೇಕು. ಭತ್ತದ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಸಲಹೆ ಮಾಡಿದರು.

ಭತ್ತ ಬೆಳೆಗೆ ಪ್ರೋತ್ಸಾಹ ನೀಡಿದ್ದಲ್ಲಿ ಮಾತ್ರ ಅಂತರ್ಜಲ ವೃದ್ಧಿಸಲು ಸಹಕಾರಿ. ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ ಎಂದು ಹೇಳಿದರು.

ಅಧ್ಯಕ್ಷ ಬಿ.ಎ. ಹರೀಶ್ ಅವರು ಬಡವರಿಗೆ ಎ.ಪಿ.ಎಲ್ ಕಾರ್ಡ್ ನೀಡ ಲಾಗಿದ್ದು, ಇದನ್ನು ಸರಿಪಡಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ತರಬೇತಿ ಕಾರ್ಯಗಾರ ಏರ್ಪಡಿಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕಿದೆ. ಹಾಗೆಯೇ ಶಿಕ್ಷಕರು ಇಲ್ಲದ ಶಾಲೆಗಳನ್ನು ಪಟ್ಟಿ ಮಾಡಿ, ಶಿಕ್ಷಕರು ನಿಯೋಜಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿ.ಪಂ. ಅಧ್ಯಕ್ಷರು ತಿಳಿಸಿದರು.

ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನ ಏರ್ಪಡಿಸುವ ನಿಟ್ಟಿನಲ್ಲಿ ಮಾಹಿತಿ ಪಡೆದ ಜಿ.ಪಂ.ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ರಾಜಸೀಟಿನಲ್ಲಿ ಸಂಗೀತ ಕಾರಂಜಿಯನ್ನು ಏಕೆ ಸರಿಪಡಿಸಿಲ್ಲ ಅವರು ಪ್ರಶ್ನಿಸಿದರು ಇದಕ್ಕೆ ಮಾಹಿತಿ ನೀಡಿದ ತೋಟಗಾರಿಕೆ ಉಪ ನಿರ್ದೇಶಕಿ ದೇವಕಿ ಅವರು ಫಲಪುಷ್ಪ ಪ್ರದರ್ಶನ ವೇಳೆಗೆ ಸಂಗೀತ ಕಾರಂಜಿ ಸಿದ್ಧವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ರಸ್ತೆ ಕಾಮಗಾರಿ, ಕುಡಿಯುವ ನೀರು ಮತ್ತಿತರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಸೂಚನೆ ನೀಡಿದರು.

ಜಿಲ್ಲೆಯ ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಆಹಾರ ಪೂರೈಕೆಯಲ್ಲಿ ಯಾವದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನ ಹರಿಸಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಸೂಚನೆ ನೀಡಿದರು.

ವೀರಾಜಪೇಟೆ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ ಸರ್ಕಾರ ಒಂದು ಲೀಟರ್ ಹಾಲಿಗೆ 23 ಜೊತೆಗೆ, ಹೆಚ್ಚುವರಿಯಾಗಿ 5 ರೂ ಪ್ರೋತ್ಸಾಹ ಧನ ನೀಡುತ್ತಿದ್ದು, ಒಟ್ಟು ರೂ. 28 ರೂ ನೀಡುತ್ತಿದೆ. ಈ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಬೇಕಿದೆ ಎಂದು ಎಂ.ಕೆ.ಸುಬ್ರಮಣಿ ಅವರು ಸಲಹೆ ಮಾಡಿದರು

ಈ ಬಗ್ಗೆ ಮಾಹಿತಿ ನೀಡಿದ ಕೆ.ಎಂ.ಎಫ್ ಅಧಿಕಾರಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ 30 ಹಾಗೂ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಮತ್ತು ಮರಗೋಡು, ಒಟ್ಟು 32 ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವಿದ್ದು, ಸಾರ್ವಜನಿಕರು ಸಹಕರಿಸಿದ್ದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಲು ಸಾಧ್ಯ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಅವರು ಕಾಡಾನೆ ಹಾವಳಿಯಿಂದ ಸಾವು ನೋವು ಸಂಭವಿಸುತ್ತಿದೆ. ಕಾಡಾನೆ ಹಾವಳಿ ನಿಯಂತ್ರಿಸಲು ರೈಲ್ವೆ ಕಂಬಿಗಳನ್ನು ಅಳವಡಿಸಬೇಕಿದೆ. ಜೊತೆಗೆ ಈಗಾಗಲೇ ತೆಗೆಯಲಾಗಿರುವ ಟ್ರಂಚ್‍ಗಳಲ್ಲಿ ಮಣ್ಣು ಕುಸಿಯುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಅವರು ಸೂಚನೆ ನೀಡಿದರು.

ಇದಕ್ಕೆ ಮಾಹಿತಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಸುಮಾರು 28 ಕಿ.ಮೀ. ಉದ್ದದ ರೈಲ್ವೆ ಕಂಬಿ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡಬೇಕು, ಆಸ್ಪತ್ರೆ ಸುತ್ತಮುತ್ತ ಕಾಡನ್ನು ಕಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಬಿ.ಎ.ಹರೀಶ್ ಅವರು ಸೂಚನೆ ನೀಡಿದರು.

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆ ಹತ್ತಿರ ಬರುತ್ತಿದ್ದು, ವಿದ್ಯುತ್ ವ್ಯತ್ಯಯ ಉಂಟಾಗದಂತೆ ಕ್ರಮಕೈಗೊಳ್ಳುವಂತೆ ಸೆಸ್ಕ್ ಎಂಜಿನಿಯರ್‍ಗೆ ಅಧ್ಯಕ್ಷರು ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ, ಐ.ಟಿ.ಡಿ.ಪಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್‍ಗಳಲ್ಲಿ ಶುಚಿತ್ವ ಕಾಪಾಡುವದು ಗುಣಮಟ್ಟದ ಆಹಾರ ಪೂರೈಕೆ ಮಾಡುವದು ರಾತ್ರಿ ವೇಳೆ ಪಾಠ ಮಾಡಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷರು ಹೇಳಿದರು.

ಅಂಬೇಡ್ಕರ್ ಡಿ.ದೇವರಾಜು ಅರಸು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು ತಮ್ಮ ನಿಗಮದ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಂತೆ ಜಿ.ಪಂ.ಅಧ್ಯಕ್ಷರು ಸೂಚನೆ ನೀಡಿದರು.

ಪ್ರಸಕ್ತ ವರ್ಷದಲ್ಲಿ ನಿಗದಿಪಡಿಸಿರುವ ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳು ಪೂರ್ಣ ಗೊಳಿಸುವಂತೆ ಎಲ್ಲಾ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ. ಉಪ ಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯಲೆಕ್ಕಧಿಕಾರಿ ನಂದ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ, ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಭಾಗ್ಯ, ಜಿ.ಪಂ. ಎಂಜಿನಿಯರ್ ರಾಜ್ ಕುಮಾರ್ ರೆಡ್ಡಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ. ಡಾ.ರಾಜೇಶ್, ಐ.ಟಿ.ಡಿ.ಪಿ. ಇಲಾಖಾಧಿಕಾರಿ ಪ್ರಕಾಶ್, .ಬಿ.ಸಿ.ಎಂ ಇಲಾಖಾಧಿಕಾರಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಲ್ಲೇಶ್‍ಸ್ವಾಮಿ, ಗಣಿ ಮತ್ತು ಹಿರಿಯ ಭೂವಿಜ್ಞಾನಿ ರೇಷ್ಮ, ಕಾರ್ಮಿಕಾಧಿಕಾರಿ, ರಾಮಚಂದ್ರ, ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ, ನಾನಾ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.