ಸೋಮವಾರಪೇಟೆ,ಫೆ.15: ತಾ.ಪಂ.ಯ ಸಾಮಾನ್ಯ ಸಭೆಗಳಿಗೆ ಸರ್ಕಾರದ ಹಲವಷ್ಟು ಇಲಾಖಾಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತೂ ನೀಡದಿರುವದು ಮತ್ತೊಮ್ಮೆ ವೇದ್ಯವಾಗಿದ್ದು, ಇದರಿಂದ ಆಕ್ರೋಶಿತರಾದ ಜನಪ್ರತಿನಿಧಿಗಳು, ಸಾಮಾನ್ಯ ಸಭೆಯನ್ನು ಮುಂದೂಡಿ, ಸಂಬಂಧಿಸಿದ ಇಲಾಖಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲು ನಿರ್ಧರಿಸಿದರು.ಇಲ್ಲಿನ ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ಇಂದು ತಾ.ಪಂ. ಸಭಾಂಗಣದಲ್ಲಿ ಪೂರ್ವಾಹ್ನ 10.30ಕ್ಕೆ ನಿಗದಿಯಾಗಿತ್ತು. ಅದರಂತೆ ಅಧ್ಯಕ್ಷೆ ಪುಷ್ಪ, ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಸದಸ್ಯರುಗಳು ಸಭಾಂಗಣದಲ್ಲಿ ಆಸೀನರಾದರು.ಆದರೆ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕಾದ ಹಲವಷ್ಟು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ಇದು ಸಭೆಯಲ್ಲಿದ್ದ ಜನಪ್ರತಿನಿಧಿಗಳನ್ನು ಕೆರಳಿಸಿತು. ಸಮಯ 11.15 ಆದರೂ ಸಹ 30 ಇಲಾಖೆಗಳ ಪಟ್ಟಿಯಲ್ಲಿ 14 ಇಲಾಖಾಧಿಕಾರಿಗಳು ಗೈರಾಗಿದ್ದರು.
ಸೋಮವಾರಪೇಟೆಯ ಹಲವು ಭಾಗದಲ್ಲಿ ರಸ್ತೆ ಕಾಮಗಾರಿಗಳು ಕಳಪೆ ಯಾಗಿದ್ದು, ಸರಕಾರದ ಹಣ ದುರುಪ ಯೋಗವಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು
(ಮೊದಲ ಪುಟದಿಂದ) ಕಳೆದ ಎರಡು ದಿನಗಳಿಂದ ಮಾಹಿತಿ ಹಕ್ಕು ಕಾರ್ಯಕರ್ತರು ಇಲ್ಲಿನ ಲೋಕೋಪ ಯೋಗಿ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರೂ, ಇಲಾಖೆಯ ಅಧಿಕಾರಿಗಳು ಇದೂವರೆಗೆ ಸ್ಪಂದಿಸಿಲ್ಲ ಎಂದು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ದೂರಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಮುಕ್ಕಾಲು ಗಂಟೆ ಕಾಯ್ದರೂ ಸಹ ಇಲಾಖಾಧಿಕಾರಿಗಳು ಬರುವ ಮುನ್ಸೂಚನೆ ಇಲ್ಲದಿದ್ದಾಗ ಆಕ್ರೋಶಗೊಂಡ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸರ್ಕಾರಿ ಇಲಾಖಾಧಿಕಾರಿಗಳು ತಾ.ಪಂ. ಬಗ್ಗೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಹಲವು ಇಲಾಖಾಧಿಕಾರಿಗಳು ಒಮ್ಮೆಯೂ ಸಾಮಾನ್ಯ ಸಭೆಗೆ ಬಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸಭೆಯಲ್ಲಿದ್ದ ಬಹುತೇಕ ಎಲ್ಲಾ ಸದಸ್ಯರೂ ದನಿಗೂಡಿಸಿ, ಸಭೆಗಳಿಗೆ ನಿರಂತರ ಗೈರಾಗುತ್ತಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲು ನಿರ್ಧರಿಸಲಾಯಿತು.
ಜಿ.ಪಂ. ಸಿಇಓ ವಿರುದ್ಧ ದೂರು: ಇತ್ತೀಚೆಗೆ ಸೋಮವಾರಪೇಟೆ ತಾ.ಪಂ.ಗೆ ಭೇಟಿ ನೀಡಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ ಅವರು ತಾ.ಪಂ.ನಲ್ಲಿ ಕೆಲಸ ಮಾಡುವ ದಲಿತ ಸಿಬ್ಬಂದಿಗೆ ಹಲ್ಲೆ ಮಾಡಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದರೂ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿ ಸದಸ್ಯರಾದ ಬಲ್ಲಾರಂಡ ಮಣಿ ಉತ್ತಪ್ಪ, ಕುಶಾಲಪ್ಪ ಹೇಳಿದರು.
ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡುವಂತೆ ಸಭೆಯಲ್ಲಿ ಪಕ್ಷಾತೀತವಾಗಿ ತೀರ್ಮಾನಿಸಲಾಯಿತು. ನಂತರ ಅಧಿಕಾರಿಗಳ ಗೈರು ಹಾಜರಾತಿ ಬಗ್ಗೆ ಚರ್ಚೆ ನಡೆದು ಸಭೆಯನ್ನು ಮುಂದೂಡಲಾಯಿತು.