ಮಡಿಕೇರಿ, ಫೆ. 15: ಇಂದು ಬಾಲಭವನದಲ್ಲಿ ಚಿಣ್ಣರದೇ ಸಂಭ್ರಮ. ಕನಸುಗಣ್ಣಳಿಂದ ಕುಳಿತಿದ್ದ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಬಾಲಭವನ ಮತ್ತು ಜಿಲ್ಲೆಯ ಕೆಲವು ಶಾಲಾ ಪುಟಾಣಿಗಳು ಗಣರಾಜ್ಯೋತ್ಸವ ಸಂಬಂಧ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪರಿ ಇದು.
ಜಾತಿ-ಪಂಗಡಗಳೆಂದು ಸಮಾಜ ಒಡೆಯುತ್ತಿರುವ ಈ ಸಂದರ್ಭದಲ್ಲಿ, ಮಕ್ಕಳು ‘ನಡೆನುಡಿ’ ಬೇಧಗಳೆಷ್ಟಿದ್ದರೂ ಭಾರತ ನಮಗೊಂದೇ, ದೇವರು ನಮಗೊಂದೇ’ ಎಂದು ಹಾಡಿ ಜಾತ್ಯತೀತತೆ, ಏಕತೆಯ ಭಾವ ಮೆರೆದರು.ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬಾಲಭವ ನದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಚಿತ್ರಕಲೆ, ನೃತ್ಯ, ಹಾಡುಗಾರಿಕೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಶಕ್ತಿಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಕಾರ್ಯಕ್ರಮ ಉದ್ಘಾಟಿಸಿ ಗೆಲ್ಲುವ ಛಲ ಬೆಳೆಸಿಕೊಳ್ಳಬೇಕೆಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಭಾಗ್ಯ ಮಾತನಾಡಿ, ಮಕ್ಕಳ ಒಡನಾಟದಿಂದ ಒತ್ತಡ ಮರೆತು ಮನಃಶಾಂತಿ ಲಭಿಸುತ್ತದೆ ಎಂದರು.
ಮಕ್ಕಳ ಸುಪ್ತ ಪ್ರತಿಭೆ ಹೊರಚಿಮ್ಮಲು ಈ ಕಾರ್ಯಕ್ರಮ ಸಹಕಾರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ ಮಮ್ತಾಜ್ ಹೇಳಿದರು.
ವೇದಿಕೆಯಲ್ಲಿ ಕಲಾವಿದೆ ಭಾರತಿ ರಮೇಶ್, ಲತೀಫ್ ಮತ್ತು ಇಲಾಖೆಯ ಮೇಲ್ವಿಚಾರಕಿ ಸವಿತ ಹಾಜರಿದ್ದರು. ಬಾಲಭವನದ ಸಜಿತ್ ಮತ್ತು ಹರೀಶ್ ಕಾರ್ಯಕ್ರಮ ನಿರೂಪಿಸಿದರು.