ಗೋಣಿಕೊಪ್ಪಲು, ಫೆ. 16: ಪೊನ್ನಂಪೇಟೆ ಮುಖ್ಯ ರಸ್ತೆಯ ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿರುವ ಪುತ್ತ ಮನೆ ಗಣೇಶ್, (ದತ್ತು) ರಾಧ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳ್ಳರು ಮನೆಯ ಮುಂಭಾಗದ ಬಾಗಿಲನ್ನು ಮುರಿದು ಮನೆಯ ಎಲ್ಲಾ ಕೊಠಡಿಗಳಿಗೂ ಪ್ರವೇಶಿಸಿ ಅಲ್ಮೇರಾಗಳನ್ನು, ಪೆಟ್ಟಿಗೆಗಳನ್ನು ಹೊಡೆದು ಚಿನ್ನ, ಹಣಕ್ಕಾಗಿ ಶೋಧನೆ ನಡೆಸಿದ್ದಾರೆ. ಆದರೆ ಕಳ್ಳರಿಗೆ ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿಲ್ಲ. ಆಕ್ರೋಶಗೊಂಡ ಕಳ್ಳರು ಮನೆಯಲ್ಲಿರುವ ಅಲ್ಮೇರಾದಲ್ಲಿದ್ದ ಬಟ್ಟೆ ಬರೆಗಳನ್ನು ಚಲ್ಲಾಪಿಲ್ಲಿಮಾಡಿ ಮನೆಯಲ್ಲಿದ್ದ ಬಂದೂಕನ್ನು ಸಂಪೂರ್ಣ ಹೊಡೆದು ಹಾಕಿ ಬಿಡಿಬಿಡಿ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಇದೇ ಮನೆಯಲ್ಲಿ ಕಳ್ಳತನ ನಡೆದಿದ್ದು ಆ ಸಂದರ್ಭದಲ್ಲಿ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣಗಳು, ಹಣವನ್ನು ದೋಚಿ ಪರಾರಿಯಾಗಿದ್ದರು. ಆದರೆ ಈ ಕಳ್ಳತನವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ. ಸುದ್ದಿ ತಿಳಿದ ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ಭೇಟಿ ನೀಡಿದ್ದು ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆ ನಡೆಸಿದ್ದಾರೆ. ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್, ಸಿಬ್ಬಂದಿಗಳಾದ ಸುಬ್ರಮಣಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ಗುತ್ತಿಗೆದಾರ ವೇಣುಗೋಪಾಲ್, ಮುಂತಾದವರು ಹಾಜರಿದ್ದರು.