ನವದೆಹಲಿ, ಫೆ. 16: ಕರ್ನಾಟಕ, ತಮಿಳುನಾಡಿನ ಜನತೆ ಅತ್ಯಂತ ಕಾತುರದಿಂದ ಎದುರು ನೋಡುತ್ತಿದ್ದ ಕಾವೇರಿ ಬಗೆಗಿನ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದ್ದು, ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.70 ಟಿಎಂಸಿ ನೀರು ಪಡೆಯಲು ಅನುಮತಿ ಸಿಕ್ಕಿದೆ.ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನೇತೃತ್ವದ ತ್ರಿ ಸದಸ್ಯ ಪೀಠ ತೀರ್ಪು ಪ್ರಕಟಿಸಿದ್ದು, ಈ ಹಿಂದೆ ನೀಡಿದ್ದಕ್ಕಿಂತ ಕರ್ನಾಟಕಕ್ಕೆ ಈ ಬಾರಿ ಹೆಚ್ಚುವರಿಯಾಗಿ 14.70 ಟಿಎಂಸಿ ನೀರು ನೀಡಿದೆ. ತಮಿಳುನಾಡಿಗೆ 177.2 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ತೀರ್ಪಿತ್ತಿದೆ.ಕರ್ನಾಟಕ ಒಟ್ಟು 284.75 ಟಿಎಂಸಿ ನೀರು ಬಳಸಿಕೊಳ್ಳಬಹುದು ಹಾಗೂ ಬೆಂಗಳೂರು ಕುಡಿಯುವ ನೀರಿಗಾಗಿ 4.75 ಟಿಎಂಸಿ ನೀರು ಬಳಸಿಕೊಳ್ಳಬಹುದಾಗಿದೆ. ತಮಿಳುನಾಡಿಗೆ ಪ್ರತಿ ವರ್ಷ ಹರಿಸುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆÉ ಮಾಡಿದೆ.
ಕೇರಳದ ಪಾಲು 30 ಟಿ.ಎಂ.ಸಿ., ಪುದುಚೇರಿಗೆ 7 ಟಿ.ಎಂ.ಸಿ. ನೀರು ಹಂಚಿಕೆ ಮಾಡಿದೆ. ಎರಡು ರಾಜ್ಯಗಳು ಸಮಾನ ಹಂಚಿಕೆ ತತ್ವ ಪಾಲಿಸಬೇಕು. ಯಾವದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ. ನದಿಗಳು ರಾಷ್ಟ್ರೀಯ ಸಂಪತ್ತು. ಮುಂದಿನ 15 ವರ್ಷ ಈ ತೀರ್ಪು ಅನ್ವಯಿಸುತ್ತದೆ ಎಂದು ತೀರ್ಪು ನೀಡಿದ್ದಾರೆ.