ಕೂಡಿಗೆ, ಫೆ. 16: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಚಿಕ್ಕತ್ತೂರು ಗ್ರಾಮದಲ್ಲಿನ ನಿವಾಸಿಗಳು ಈಗಾಗಲೇ ಮನೆಗಳನ್ನು ನಿರ್ಮಿಸಿಕೊಂಡು ವಾಸವಿರುವ ಜಾಗದ ಸರ್ವೆ ನಂಬರ್ (1/1), ಮತ್ತು ಗ್ರಾಮದಲ್ಲಿನ ತೋಟವೊಂದರ ಸರ್ವೆ ನಂಬರ್ (11/1) ಅದಲು-ಬದಲಾಗಿದ್ದು, ಸರಿಪಡಿಸುವಂತೆ ಆ ವ್ಯಾಪ್ತಿಯ ಸದಸ್ಯರಾದ ಪಾರ್ವತಮ್ಮ, ಮಂಜುನಾಥ್, ಸುರೇಶ್, ಶೇಖರ್ ಒತ್ತಾಯಿಸಿದರು. ಬೇಸಿಗೆ ಸಮೀಪಿಸುತ್ತಿದ್ದು ಪಂಚಾಯಿತಿ ವ್ಯಾಪ್ತಿಯ ಬೋರ್ವೆಲ್ನಲ್ಲಿನ ನೀರು ಕಡಿಮೆಯಾಗುತ್ತಿದೆ. ಮುಂಜಾಗ್ರತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಫಿಲೋಮಿನ ಹೇಳಿದರು. ಸದಸ್ಯರು ಆಯಾಯ ವಾರ್ಡಿನಲ್ಲಿ ಕಸ ವಿಲೇವಾರಿ ಮಾಡಲು, ಬೀದಿ ದೀಪ ಅಳವಡಿಸುವ ಬಗ್ಗೆ ಹಾಗೂ ವಾರ್ಡಿನ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ಮಾಸಿಕ ಸಭೆಯಲ್ಲಿ ಸದಸ್ಯರು ತಿಳಿಸಿದ ವಿಚಾರಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿ, ಕುಡಿಯುವ ನೀರು, ಕಸ ವಿಲೇವಾರಿಯ ವ್ಯವಸ್ಥೆಯನ್ನು ಮಾಡಲಾಗುವದು ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ಸಭೆಗೆ ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ಗ್ರಾಮ ಸಭೆ ನಡೆಸುವ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ ಮತ್ತು ಸದಸ್ಯರು ಇದ್ದರು.