ಕೂಡಿಗೆ, ಫೆ. 17: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ವಾಸವಿರುವ ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ ಹಣವನ್ನು ಬೇರೆಡೆಯ ಕಾಮಗಾರಿಗಳಿಗೆ ಉಪಯೋಗಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾಧ್ಯಕ್ಷ ಕೆ.ಬಿ.ರಾಜು ಅವರ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಜನತಾ ಕಾಲೋನಿಯ ನಿವಾಸಿಗಳು ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ಕೂಡುಮಂಗಳೂರು ಜನತಾ ಕಾಲೋನಿಯಲ್ಲಿ ವಾಸವಿರುವ ಬಡವರಿಗೆ ಹೊಸ ಮನೆಗಳನ್ನು ಮಂಜೂರು ಮಾಡಬೇಕು. ಕಾಲೋನಿಯಲ್ಲಿ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ತೆರವುಗೊಳಿಸಿ, ವಿದ್ಯುತ್ ಹೊಸ ಕಂಬಗಳನ್ನು ಹಾಕಬೇಕು. ಪೂರ್ಣ ಪ್ರಮಾಣದ ಗುಣಮಟ್ಟದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಿ ಮನೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕು. ಹಾಗೂ ಕೂಡುಮಂಗಳೂರು ಪಂಚಾಯ್ತಿಗೆ ಹೆಚ್ಚು ಪೌರ ಕಾರ್ಮಿಕರನ್ನು ನೇಮಕ ಮಾಡಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಕೆಲಸಗಾರರನ್ನಾಗಿ ನೇಮಕ ಮಾಡಬೇಕು. ಪಂಚಾಯ್ತಿ ವ್ಯಾಪ್ತಿಯ ರಸ್ತೆ ಬದಿ ಕಸಗಳ ರಾಶಿಯನ್ನು ತೆರವುಗೊಳಿಸಿ ಸ್ಪಚ್ಛಗೊಳಿಸಬೇಕು, ಪಂಚಾಯಿತಿ ವ್ಯಾಪ್ತಿಯ ಬಡವರಿಗೆ ಭೀಮಾ ಯೋಜನೆ ಕಾರ್ಡುಗಳನ್ನು ಮಾಡಿಸಿ ಪಂಚಾಯ್ತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಸಕಲ ಸೌಲಭ್ಯವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಕುಟುಂಬದ ಕಾಲೋನಿಗೆ ಈಗಾಗಲೇ ಗ್ರಾ.ಪಂ. ಅನುದಾನದಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದ್ದು, ಅದನ್ನು ಶುಚಿತ್ವಗೊಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಬಿ.ರಾಜು, ಹೋಬಳಿ ಅಧ್ಯಕ್ಷ ಕೀರ್ತಿರಾಜ್, ಜನತಾಕಾಲೋನಿಯ ಕೆ.ಟಿ.ಚೆಲುವರಾಜ್, ರಂಗಸ್ವಾಮಿ, ಮಂಜು, ಶಂಕರ್, ಮಂಜುನಾಥ್, ಪೆರುಮಾಳ್ ಹಾಗೂ ಕಾಲೋನಿಯ ನಿವಾಸಿಗಳು ಇದ್ದರು.