ತಿತಿಮತಿ, ಫೆ. 17: ಕೊಡಗಿನ ಕಾಡು ಮಕ್ಕಳು ತಲತಲಾಂತರಗಳಿಂದ ದಟ್ಟ ಕಾನನದ ನಡುವೆ ಇದಿಂಗೂ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಸೂಕ್ತ ಮೂಲಭೂತ ಸೌಕರ್ಯವಿಲ್ಲದೆ ಪರಿತಪಿಸುತ್ತಿರುವ ಹಾಡಿ ಮಕ್ಕಳಿಗೆ ಇದೀಗ ಸಿಹಿ ಸುದ್ದಿ ಬಂದಿದೆ. ವೀರಾಜಪೇಟೆ ತಾಲೂಕಿನ ಹುಲಿ ಸಂರಕ್ಷಿತಾ ಪ್ರದೇಶದ ಅಂಚಿನಲ್ಲಿರುವ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಹಾಗೂ ನಾಲ್ಕೇರಿ ಪಂಚಾಯಿತಿ ವ್ಯಾಪ್ತಿಯ 1 ಹಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಸ್ಪಷ್ಟ ನಿರ್ದೇಶನ ಬಂದಿದ್ದು ಇದರಿಂದ ಹಾಡಿ ನಿವಾಸಿಗಳಲ್ಲಿ ಸಂತಸ ಮನೆ ಮಾಡಿದೆ.
ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇನಿಹಡ್ಲು, ಕಾರೆಕಂಡಿ, ಮಜ್ಜಿಗೆಹಳ್ಳ ಹಾಗೂ ಬೊಂಬುಕಾಡು ಹಾಡಿಗಳಿಗೆ ಈ ಭಾಗ್ಯ ದೊರಕಿದೆ. ಚೇನಿಹಡ್ಲುವಿನಲ್ಲಿ 82, ಕಾರೆಕಂಡಿ 80, ಮಜ್ಜಿಗೆಹಳ್ಳ 75 ಹಾಗೂ ಬೊಂಬುಕಾಡುವಿನಲ್ಲಿ 60 ಕುಟುಂಬಗಳು ವಾಸಿಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಕೊಡಗು ಜಿಲ್ಲೆಯ ತಿತಿಮತಿ ಗ್ರಾಮಕ್ಕೆ ಭೇಟಿ ನೀಡಿ ಹಾಡಿ ನಿವಾಸಿಗಳ ಅಹವಾಲು ಆಲಿಸಿದ್ದರು. ನಂತರ ಅಲ್ಲೇ ಇದ್ದ ಅರಣ್ಯ ಇಲಾಖಾಧಿಕಾರಿಗಳಿಗೆ ಸಮಸ್ಯೆ ನಿವಾರಿಸುವಂತೆ ಸೂಚನೆ ನೀಡಿದ್ದರು ನಂತರ ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಳಿಗೆ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದರು. ನಂತರ ಅರಣ್ಯ ಇಲಾಖೆ ಈ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ಹಿಂಬರಹ ಸಲ್ಲಿಸಿತ್ತು. ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಿಂದ ಉಲ್ಲೇಖಿತ ಪತ್ರ ಪರಿಶೀಲಿಸಿ ನಾಗರಹೊಳೆ ಹುಲಿ ರಕ್ಷಿತಾರಣ್ಯ ಅಂಚಿನಲ್ಲಿರುವ ಗಿರಿಜನರಿಗೆ ವಾಸದ ಹಕ್ಕು ಮತ್ತು ಉಳುಮೆ ಹಕ್ಕನ್ನು ಈಗಾಗಲೇ ಮಾನ್ಯ ಮಾಡಿದ್ದು ಇದೀಗ ಮನೆಗಳನ್ನು ದುರಸ್ತಿ ಹಾಗೂ ಹೊಸ ಮನೆಗಳನ್ನು ಕಟ್ಟಿಕೊಳ್ಳಬಹುದು ಜೊತೆಗೆ ಸರ್ಕಾರದ ಯೋಜನೆಗಳಿಗೆ ಅನುಮತಿ ನೀಡಲು ಯಾವದೇ ಅಭ್ಯಂತರವಿಲ್ಲ. ಅರಣ್ಯ ಇಲಾಖೆ ಕಾಯ್ದೆಯ ಕಲಂ-3(2)ರಂತೆ 1980ರ ಅರಣ್ಯ ಕಾಯ್ದೆಯಲ್ಲಿ ಏನೇ ಇದ್ದರೂ ಅರಣ್ಯವಾಸಿಗಳ ಮೂಲಸೌಲಭ್ಯಗಳನ್ನು ಒದಗಿಸುವ ಭೂಮಿಯನ್ನು ನೀಡಲು ಅವಕಾಶವಿದೆ. ಈ ಅಧಿಕಾರವನ್ನು ಸಂಬಂಧಿಸಿದ ಅರಣ್ಯ ವಿಭಾಗ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ಮುಖ್ಯಸ್ಥರಿಗೆ ಭಾರತ ಸರ್ಕಾರದ ಗಿರಿಜನ ಮಂತ್ರಾಲಯದಿಂದ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ನೀಡಲಾಗಿದೆ ಅದರಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪತ್ರ ಮುಖೇನ ನಿರ್ದೇಶನ ನೀಡಿದ್ದಾರೆ. ಇದರಿಂದ ಹಾಡಿ ನಿವಾಸಿಗಳ ಮೊಗದಲ್ಲಿ ಮಂದಹಾಸ ಮೂಡಿದ್ದು ಹಲವಾರು ವರ್ಷಗಳ ಕೂಗಿಗೆ ನ್ಯಾಯ ದೊರಕಿದಂತಾಗಿದೆ. ಹಾಡಿ ಅಭಿವೃದ್ಧಿ ಸ್ಥಳೀಯ ಜನಪ್ರತಿನಿಧಿಗಳು ಕೈಜೋಡಿಸಿದ್ದು ಅಗತ್ಯ ಸೌಕರ್ಯಕ್ಕೆ ನಮ್ಮಿಂದಾಗುವ ಸಹಾಯ ಮಾಡುತ್ತೇವೆ ಎಂದು ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಜಿ.ಪಂ. ಸದಸ್ಯೆ ಪಂಕಜ ಹಾಗೂ ತಾ.ಪಂ. ಸದಸ್ಯೆ ಆಶಾ ಜೇಮ್ಸ್ ತಿಳಿಸಿದ್ದಾರೆ.