ಗೋಣಿಕೊಪ್ಪಲು, ಫೆ. 16: ಸಕಾಲದಲ್ಲಿ ರೈತರಿಗೆ ಪರಿಹಾರ ನೀಡುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ಮುಂದಾಳತ್ವದಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಳೆದ ಒಂದು ವಾರದ ಹಿಂದೆ ಮಾಯಮುಡಿ ಪಂಚಾಯಿತಿಯ ಧನುಗಾಲ ಗ್ರಾಮದ ನಿವಾಸಿ ಎಸ್.ಎಲ್. ಮುರುಡೇಶ್ವರ ಅವರಿಗೆ ಮೂರು ಹಸುಗಳನ್ನು ಹುಲಿ ಹಿಡಿದು ಕೊಂದಿರುವ ಬಗ್ಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಸ್ಥಳದಲ್ಲಿದ್ದ ತಿತಿಮತಿ ವಲಯ ಅರಣ್ಯಾಧಿಕಾರಿ ಶ್ರೀಪತಿ, ಉಪ ಸಂರಕ್ಷಣಾಧಿಕಾರಿ ಮರಿಯ ಕೃಷ್ಣರಾಜ್ ಹಾಗೂ ಇತರ ಅರಣ್ಯ ಅಧಿಕಾರಿಗಳಿಗೆ ಒತ್ತಾಯ ಹೇರಿದ್ದರು. ಪ್ರತಿಭಟನೆಗೆ ಮಣಿದ ಅರಣ್ಯಾಧಿಕಾರಿ ಗಳು ರೂ. 30 ಸಾವಿರ ಪರಿಹಾರವನ್ನು ತಾತ್ಕಾಲಿಕವಾಗಿ ವಿತರಿಸಿದ್ದರು. ಪಟ್ಟು ಬಿಡದ ರೈತರು ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಈ ಸಂದರ್ಭ ಮಧ್ಯಸ್ಥಿಕೆ ವಹಿಸಿದ್ದ ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ಅವರು ಮೂರು ದಿನದ ಒಳಗೆ ಅರಣ್ಯಾಧಿಕಾರಿಗಳು ಒಂದು ಲಕ್ಷ ಪರಿಹಾರ ವಿತರಿಸುವ ಭರವಸೆ ನೀಡಿದ್ದರು. ಇವರ ಮಾತಿನಂತೆ ರೈತರು ಪ್ರತಿಭಟನೆಯನ್ನು ಹಿಂಪಡೆ ದಿದ್ದರು. ಆದರೆ ಅರಣ್ಯಾಧಿಕಾರಿಗಳು ನೀಡಿದ ಭರವಸೆಯಂತೆ ನಡೆದುಕೊಳ್ಳಲಿಲ್ಲ. ಇದರಿಂದ ಅಸಮಾಧಾನಗೊಂಡ ರೈತರು ಇಂದು ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ತಿತಿಮತಿ ವಲಯ ಅರಣ್ಯಾಧಿಕಾರಿ ಶ್ರೀಪತಿ ಅವರು ರೈತರ ಮನವಿಯನ್ನು ಸ್ವೀಕರಿಸಿದರು. ತಮ್ಮ ಮೇಲಾಧಿಕಾರಿ ಗಳ ಗಮನಕ್ಕೆ ನಡೆದ ಘಟನೆಯನ್ನು ಲಿಖಿತವಾಗಿ ಸಲ್ಲಿಸಿದ್ದೇವೆ. ಒಂದು ಲಕ್ಷ ಪೂರ್ಣ ಪ್ರಮಾಣದ ಪರಿಹಾರ ನೀಡುವಂತೆ ಪತ್ರದಲ್ಲಿ ತಿಳಿಸಿದ್ದೇವೆ. ಮೇಲಾಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ವಹಿಸುವದಾಗಿ ತಿಳಿಸಿದ್ದಾರೆ. ಆದ್ದರಿಂದ ಕೆಲವೇ ದಿನಗಳಲ್ಲಿ ಪರಿಹಾರ ಮೊತ್ತವು ನೊಂದವರ ಕೈ ಸೇರಲಿದೆ ಎಂದು ಶ್ರೀಪತಿ ಪ್ರತಿಭಟನಾಕಾರರಿಗೆ ತಿಳಿಸಿದರು. ಮೇಲಾಧಿಕಾರಿಗಳಿಗೆ ಬರೆದ ಪತ್ರದ ನಕಲನ್ನು ಪ್ರತಿಭಟನಾಕಾರಿಗೆ ನೀಡಿದರು.

ಹಸುವನ್ನು ಕಳೆದುಕೊಂಡ ಧನುಗಾಲ ಗ್ರಾಮದ ಮುರುಡೇಶ್ವರ ಹಾಗೂ ಕಿರುಗೂರಿನ ಕೊದೇಂಗಡ ಪೂವಮ್ಮ ಅವರು ಮಡಿಕೇರಿಯ ಮುಖ್ಯ ಸಂರಕ್ಷಣಾಧಿಕಾರಿ, ವೀರಾಜಪೇಟೆಯ ಉಪ ಸಂರಕ್ಷಣಾಧಿಕಾರಿ, ತಿತಿಮತಿಯ ಸಹಾಯಕ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲ ಹೇಮಚಂದ್ರ ಹಾಗೂ ರೈತ ಮುಖಂಡರÀ ಮೂಲಕ ಪೊನ್ನಂಪೇಟೆ ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿ ಮಹೇಶ್ ಅವರಿಗೆ ದೂರು ನೀಡಿದರು. ಈ ಸಂದರ್ಭ ಠಾಣಾಧಿಕಾರಿ ಅರ್ಜಿ ಸ್ವೀಕರಿಸಿ ಸ್ವೀಕೃತಿ ಪತ್ರ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರುಗಳಾದ ಪುಚ್ಚಿಮಾಡ ಸುಭಾಷ್, ಮಚ್ಚಾಮಾಡ ರಂಜಿ, ಪುಚ್ಚಿಮಾಡ ಸುನೀಲ್, ಮಲ್ಚೀರ ಅಶೋಕ್, ಮಲ್ಚೀರ ಗಿರೀಶ್, ಬಾಚಮಾಡ ಭವಿಕುಮಾರ್, ಪುಳ್ಳಂಗಡ ಸುರೇಶ್,ತೀತರಮಾಡ ರಾಜ, ಶಿವಚಾರೀರ ಜಗದೀಶ್ ಮತ್ತಿತರು ಹಾಜರಿದ್ದರು.