ಸೋಮವಾರಪೇಟೆ, ಫೆ. 16 : ರಾಷ್ಟ್ರ ರಕ್ಷಣೆಗಾಗಿ ಸೌಹಾರ್ಧತೆಯ ಸಂಕಲ್ಪ ಎಂಬ ಧ್ಯೇಯವಾಕ್ಯದೊಂದಿಗೆ ಕೊಡ್ಲಿಪೇಟೆಯ ಎಸ್‍ಕೆಎಸ್‍ಎಸ್‍ಎಫ್ ಮತ್ತು ಎಸ್‍ವೈಎಸ್ ಆಶ್ರಯದಲ್ಲಿ ತಾ. 18ರಂದು ಅಪರಾಹ್ನ 2 ಗಂಟೆಗೆ ಕೊಡ್ಲಿಪೇಟೆಯಲ್ಲಿ ಧಾರ್ಮಿಕ ಸೌಹಾರ್ದ ಸಮಾವೇಶ ಆಯೋಜಿಸ ಲಾಗಿದೆ ಎಂದು ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಜಹೀರ್ ನಿಜಾಮಿ ತಿಳಿಸಿದರು.ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 18ರಂದು ಅಪರಾಹ್ನ 2 ಗಂಟೆಗೆ ಕೊಡ್ಲಿಪೇಟೆಯ ಹ್ಯಾಂಡ್‍ಪೋಸ್ಟ್ ಬಳಿಯಿರುವ ಶಂಸುಲ್ ಉಲಮಾ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ವೈಎಸ್ ಅಧ್ಯಕ್ಷ ಇಬ್ರಾಹಿಂ ವಹಿಸಲಿದ್ದು, ಎಸ್‍ಕೆಎಸ್‍ಎಸ್‍ಎಫ್‍ನ ಕಾರ್ಯದರ್ಶಿ ಸುಹೈಬ್ ಫೈಜಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬ್ಯಾಡಗೊಟ್ಟದ ನಿವೃತ್ತ ಮುಖ್ಯೋಪಾಧ್ಯಾಯ ಮಹೇಶ್ವರಪ್ಪ, ನಿವೃತ್ತ ಶಿಕ್ಷಕ ಎಲ್.ಎಲ್. ರಾಜಪ್ಪ, ಮಾಜೀ ಸೈನಿಕ ಅಬ್ದುಲ್ ರಜಾಕ್, ಸಮಾಜ ಸೇವಕ ಮೋಹನ್ ಮೌರ್ಯ ಅವರುಗಳನ್ನು ಸನ್ಮಾನಿಸಲಾಗುವದು ಎಂದರು.

ಇದರೊಂದಿಗೆ ತಾ. 18 ಮತ್ತು 19ರಂದು ಮಜ್ಲಿಸುನ್ನೂರ್-ಎಸ್‍ಕೆಎಸ್‍ಎಸ್‍ಎಫ್ ಮತ್ತು ಎಸ್‍ವೈಎಸ್‍ನ 4ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ತಾ. 18ರ ಸಂಜೆ 8 ಗಂಟೆಗೆ ಸುಂಟಿಕೊಪ್ಪ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಜೈನುದ್ದೀನ್ ಫೈಜಿ ಉದ್ಘಾಟಿಸಲಿದ್ದು, ವೀರಾಜಪೇಟೆ ಮಸೀದಿಯ ಖಲೀಲ್ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆ. ತಾ. 19ರಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಹಮ್ಮದ್ ಫೈಝಿ, ನೆಲ್ಲಿಹುದಿಕೇರಿಯ ಇಕ್ಬಾಲ್ ಮುಸ್ಲಿಯಾರ್, ಸಯ್ಯದ್ ಸಫ್‍ವಾನ್ ತಂಙಳ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಎಸ್‍ಕೆಎಸ್ ಎಸ್‍ಎಫ್ ಗೌರವಾಧ್ಯಕ್ಷ ಸಿದ್ದೀಕ್ ಹಾಜಿ, ಕಾರ್ಯದರ್ಶಿ ಅಬ್ದುಲ್ ರಹಮಾನ್, ರಜಾಕ್ ಫೈಝಿ, ಕಾರ್ಯದರ್ಶಿ ಖಲಂದರ್ ಶಾಫಿ ಉಪಸ್ಥಿತರಿದ್ದರು.