ಮಡಿಕೇರಿ, ಫೆ. 16 : ದಕ್ಷಿಣ ಕೊಡಗಿನ ಮೂಲಕ ಹಾದು ಹೋಗಲಿದೆ ಎನ್ನಲಾಗುತ್ತಿರುವ ರೈಲ್ವೆ ಮಾರ್ಗದ ಬಗ್ಗೆ ಕಾಂಗ್ರೆಸ್ ಪಕ್ಷದ “ಬಿ” ಟೀಮ್ ಆಗಿರುವ ಪರಿಸರವಾದಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಕಾರ್ಯದರ್ಶಿ ಮನುಮುತ್ತಪ್ಪ, ಪ್ರಧಾನ ಮಂತ್ರಿಗಳು ಆಗಮಿಸುವ ಸಂದರ್ಭ ದಲ್ಲೇ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವದು ಖಂಡನೀಯ ವೆಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 18 ರಂದು ಮೈಸೂರಿ ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕುತಂತ್ರ ಅಡಗಿದೆ ಎಂದು ಟೀಕಿಸಿದರು. ರಾಜ್ಯ ಸರಕಾರದ ಅನುಮತಿ ಇಲ್ಲದೆ ರೈಲ್ವೆ ಮಾರ್ಗ ನಿರ್ಮಿಸಲು ಸಾಧ್ಯವಿಲ್ಲ, ಇದು ರಾಜ್ಯದ ಜವಬ್ದಾರಿಯಾಗಿರುವ ದರಿಂದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಹೋರಾಟ ಕೈಗೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಸರವಾದಿ ಕರ್ನಲ್ ಮುತ್ತಣ್ಣ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದ್ದರು. ಇದೀಗ ಚುನಾವಣೆ ಸಮೀಪಿಸುತ್ತಿರುವದರಿಂದ ರೈಲು ಮಾರ್ಗದ ನೆಪವೊಡ್ಡಿ ಗೊಂದಲ ಸೃಷ್ಟಿಸಲು ಪ್ರತಿಭಟನೆ ನಡೆಸುತ್ತಿದ್ದು, ಕೊಡವ ಸಮಾಜಗಳು ಈ ಕುತಂತ್ರಕ್ಕೆ ಮಣಿಯಬಾರದೆಂದು ಮನುಮುತ್ತಪ್ಪ ಕರೆ ನೀಡಿದರು.
ಬಿಜೆಪಿ ಪ್ರಣಾಳಿಕೆ ಮೂಲಕ ಕುಶಾಲನಗರದವರೆಗೆ ಮಾತ್ರ ರೈಲು ಮಾರ್ಗವೆಂದು ಸ್ಪಷ್ಟಪಡಿಸಿದೆ. ಆದರೂ ನಾಟಕೀಯ ಬೆಳವಣಿಗೆಯನ್ನು ಸೃಷ್ಟಿಸಲಾಗುತ್ತಿದೆ ಎಂದರು.
ಒಂದು ವೇಳೆ ರೈಲು ಮಾರ್ಗದ ಯೋಜನೆ ಜಾರಿಗೆ ಮುಂದಾದರೆ ಅದನ್ನು ವಿರೋಧಿಸಿ ಬಿಜೆಪಿ ತನ್ನ ಸ್ವಂತ ಬಲದಿಂದ ಹೋರಾಟವನ್ನು ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
ಹೈಟೆನ್‍ಷನ್ ವಿದ್ಯುತ್ ಮಾರ್ಗದ ಪರವಾಗಿ ಕೆ.ಜಿ.ಬೋಪಯ್ಯ ಅವರು ಪತ್ರ ನೀಡಿದ್ದರು ಎನ್ನುವ ಆರೋಪವಿದ್ದು, ಪ್ರಮಾಣ ಮಾಡಲು ಕೆಲವರು ದೇವಾಲಯಕ್ಕೆ ಆಹ್ವಾನಿಸಿದ್ದಾರೆ. ಬೋಪಯ್ಯ ಅವರು ವಿದ್ಯುತ್ ಮಾರ್ಗದ ಪರ ಪತ್ರ ಬರೆದಿಲ್ಲವೆಂದ ಅವರು, ಯಾವದೇ ದೇವಾಲಯಕ್ಕೆ ಬಂದು ಪ್ರಮಾಣ ಮಾಡಲು ಸಿದ್ಧವಿರುವದಾಗಿ ತಿಳಿಸಿದರು. ಜಿಲ್ಲೆಯ ಜನರಿಗೆ ಧಕ್ಕೆಯಾಗುತ್ತಿದ್ದ ಡಾ. ಕಸ್ತೂರಿರಂಗನ್ ವರದಿ ಹಾಗೂ ಜಮ್ಮಾಬಾಣೆ ವಿವಾದದ ಹೋರಾಟದ ಸಂದರ್ಭ ಡೋಂಗಿ ಪರಿಸರವಾದಿಗಳು ಎಲ್ಲಿದ್ದರು ಎಂದು ಪ್ರಶ್ನಿಸಿದ ಅವರು ಹೈಟೆನ್‍ಷನ್ ವಿದ್ಯುತ್ ಮಾರ್ಗದ ವಿರುದ್ಧದ ಹೋರಾಟವನ್ನು ಕೈಬಿಟ್ಟ ಬಗ್ಗೆ ಜಿಲ್ಲೆಯ ಜನತೆಗೆ ಸ್ಪಷ್ಟೀಕರಣ ನೀಡಲಿ ಎಂದು ಒತ್ತಾಯಿಸಿದರು. ವಿದ್ಯುತ್ ಮಾರ್ಗದ ವಿರುದ್ಧ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರುಗಳು ಭರವಸೆ ನೀಡಿದರೆಂದು ಪ್ರತಿಭಟನೆಯನ್ನು ಕೈಬಿಟ್ಟು ಮೌನಕ್ಕೆ ಶರಣಾಗಿದ್ದು, ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೈಟೆನ್‍ಷನ್ ವಿದ್ಯುತ್ ಮಾರ್ಗ ಈ ಹಿಂದೆ ಇದ್ದ ಯುಪಿಎ ಸರಕಾರದ ಪಾಪದ ಕೂಸಾಗಿದ್ದು, 2008 ರಿಂದ 2013 ರವರೆಗೆ
(ಮೊದಲ ಪುಟದಿಂದ) ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ವಿದ್ಯುತ್ ಮಾರ್ಗಕ್ಕೆ ಅವಕಾಶವೇ ನೀಡಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಮಾರ್ಗ ನಿರ್ಮಾಣವಾಯಿತು ಎಂದು ಮನುಮುತ್ತಪ್ಪ ತಿಳಿಸಿದರು. ವಿದ್ಯುತ್ ಮಾರ್ಗದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನ ಹಸಿರು ಪೀಠ ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತ ಸ್ವಾರ್ಥವೇ ತುಂಬಿದಂತೆ ಕಂಡು ಬಂದಿದೆ. ನ್ಯಾಯಾಲಯದ ಸಮಯವನ್ನು ಹಾಳು ಮಾಡಲಾಗಿದೆ ಎಂದು ಛೀ ಮಾರಿ ಹಾಕಿತ್ತು. ಇದೇ ಕಾರಣಕ್ಕೆ ಡೋಂಗಿ ಪರಿಸರವಾದಿಗಳು ಧರಣಿ ಸತ್ಯಾಗ್ರಹವನ್ನು ಸ್ಥಗಿತಗೊಳಿಸಿದ್ದರು ಎಂದು ಆರೋಪಿಸಿದ ಮನುಮುತ್ತಪ್ಪ ಹಸಿರು ಪೀಠದ ತೀರ್ಪನ್ನು ಜಿಲ್ಲೆಯ ಜನರಿಗೆ ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.
ವಿನಾಕಾರಣ ಜನರ ಹಾದಿ ತಪ್ಪಿಸುತ್ತಿರುವ ಪರಸರವಾದಿಗಳು ಮೂರು ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.
ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಯಾಕೆ ಪ್ರತಿಭಟನೆ ನಡೆಸಲಿಲ್ಲ? ವಿದ್ಯುತ್ ಮಾರ್ಗದ ವಿರುದ್ಧದ ಹೋರಾಟವನ್ನು ದಿಢೀರ್ ಸ್ಥಗಿತ ಮಾಡಿದ್ದು ಯಾಕೆ ಮತ್ತು ಪ್ರಕರಣವನ್ನು ಹಸಿರು ಪೀಠ ವಜಾ ಮಾಡಿದ್ದು ಯಾಕೆ? ಎಂದು ಮೂರು ಪ್ರಶ್ನೆಗಳನ್ನು ಮನುಮುತ್ತಪ್ಪ ಪರಿಸರವಾದಿಗಳ ಮುಂದಿಟ್ಟರು.
ಬಿಜೆಪಿ ಆರ್ಥಿಕ ಪ್ರಕೋಷ್ಠಾದ ಸಂಚಾಲಕ ಬೊಟ್ಟಂಗಡ ರಾಜು ಮಾತನಾಡಿ ಕರ್ನಲ್ ಮುತ್ತಣ್ಣ ಹಾಗೂ ಅವರ ಬೆಂಬಲಿಗರು ನೈಜ ಪರಿಸರವಾದಿಗಳು ಅಲ್ಲವೆಂದು ಟೀಕಿಸಿದರು. ವಿದೇಶಿ ಸೌಲಭ್ಯಗಳಿಗಾಗಿ ಚಟುವಟಿಕೆ ನಡೆಸುತ್ತಿದ್ದಾರೆಯೇ ಹೊರತು ಕೊಡಗಿನಲ್ಲಿ ಇವರು ಯಾವದೇ ಪರಿಸರವನ್ನು ಉಳಿಸುವ ಪ್ರಯತ್ನ ಮಾಡಿಲ್ಲ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗಿಲ್ಲ ಮತ್ತು ವನ್ಯಜೀವಿಗಳಿಗೆ ಆಹಾರದ ಕೊರತೆ ಉಂಟಾಗಿಲ್ಲ. ಬದಲಿಗೆ ಕಾಡಾನೆಗಳ ಸಂತತಿ ಹೆಚ್ಚಾಗಿದೆಯಷ್ಟೇ ಎಂದು ಅಭಿಪ್ರಾಯಪಟ್ಟ ಬೊಟ್ಟಂಗಡ ರಾಜು, ಜನರ ಹಾದಿ ತಪ್ಪಿಸುತ್ತಿರುವ ಪರಿಸರವಾದಿಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ, ಖಜಾಂಚಿ ಮೋಹನ್ ಮೊಣ್ಣಪ್ಪ ಹಾಗೂ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿಸುಬ್ರಮಣಿ ಉಪಸ್ಥಿತರಿದ್ದರು.