ನಾಪೋಕ್ಲು, ಫೆ. 17: ಮಳೆ ಬೆಳೆ ದೇವರು ಎಂದು ಪ್ರತೀತಿ ಇರುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ಮುಜರಾಯಿ ಇಲಾಖೆಯ ಅಧೀನದಲ್ಲಿದ್ದು ಇದಕ್ಕೆ ಒಳಪಟ್ಟ ನೂರಾರು ಎಕರೆ ಜಮೀನನ್ನು ಕೆಲವರು ಅಕ್ರಮವಾಗಿ ಬಳಸಿಕೊಂಡಿದ್ದಲ್ಲದೇ ಕಾನೂನು ಬಾಹಿರವಾಗಿ ದಾಖಲೆಗಳನ್ನು ನಿರ್ಮಿಸಿಕೊಂಡಿರುವ ಬಗ್ಗೆ ಈ ಹಿಂದೆ ಹಲವಾರು ಬಾರಿ ಪ್ರಸ್ತಾಪವಾಗಿ ನೆನೆಗುದಿಗೆ ಬಿದ್ದಿದ್ದು ಇದೀಗ ಆಸ್ತಿ ಸ್ವಾಧೀನದೊಂದಿಗೆ ಬಂದೋಬಸ್ತಿಗೆ ದೇವಾಲಯದ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ ಹಾಗೂ ಭಕ್ತಜನಸಂಘ ಒಮ್ಮತದಿಂದ ಮುನ್ನಡಿಯಿಟ್ಟಿದೆ.ಈ ಸಂಬಂಧ ಇತ್ತೀಚೆಗೆ ದೇವಾಲಯದ ಹಿಂಬದಿಯಲ್ಲಿದ್ದ ನೂರಾರು ಎಕರೆ ಬಾಣೆ ಜಾಗವನ್ನು, ಶೆಡ್, ಕಾಪಿ ತೋಟ ಸೇರಿದಂತೆ ಕೃಷಿ ಜಾಗವನ್ನು ಕಂದಾಯ ಇಲಾಖೆ ಮೂಲಕ ಅಧೀನಕ್ಕೆ ತೆಗೆದು ಕೊಂಡಿರುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ರೀತಿ ದೇವಾಲಯದ ನೂರಾರು ಎಕರೆ ಜಾಗವನ್ನು ಹಲವರು ಅಕ್ರಮವಾಗಿ ಬಳಸಿದ್ದಲ್ಲದೇ ಕೃಷಿ ಚಟುವಟಿಕೆಯಲ್ಲಿ ತೊಡಗಿ ಕಾನೂನು
(ಮೊದಲ ಪುಟದಿಂದ) ಬಾಹಿರವಾಗಿ ದಾಖಲೆಗಳನ್ನು ನಿರ್ಮಿಸಿಕೊಂಡಿದ್ದು ಇದನ್ನು ಸ್ವಾಧೀನ ಪಡಿಸುವ ನಿಟ್ಟಿನಲ್ಲಿ ಭಕ್ತಜನಸಂಘ, ಅಕ್ರಮ-ಸಕ್ರಮ ಸಮಿತಿ ತಕ್ಕ ಮುಖ್ಯಸ್ಥರ ಸಂಯುಕ್ತ ಆಶ್ರಯದಲ್ಲಿ ನಡೆದ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ತಾ.23 ರಂದು ಕಂದಾಯ ಇಲಾಖಾಧಿಕಾರಿ ಗಳ ಸಮ್ಮುಖದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.
ಅಂದು ಒಮ್ಮತದ ತೀರ್ಮಾನಕ್ಕೆ ಮಾನ್ಯತೆ ಸಿಗದಿದ್ದಲ್ಲಿ ಕಾನೂನು ಮೂಲಕ ಸ್ವಾಧೀನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಭಕ್ತಜನಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಪಾಂಡಂಡ ನರೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಸಭೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಅಂಜಪರವಂಡ ಚೋಮಣಿ, ಕಲ್ಯಾಟಂಡ ಮುತ್ತಪ್ಪ, ಮರ್ಚಂಡ ಸುರೇಶ್, ಉದಿಯಂಡ ಮೋಹನ್, ನಂಬುಡಮಡ ಅಯ್ಯಪ್ಪ, ಬೊಳಿಯಾಡಿರ ಸಂತು ಸುಬ್ರಮಣಿ, ಕೋಡಿಮಣಿಯಂಡ ಸುರೇಶ್ ಇನ್ನಿತರರು ಇದ್ದರು. - ದುಗ್ಗಳ