ಮಡಿಕೇರಿ, ಫೆ. 16: ತಾ. 8 ರಂದು ಕೊಡಗರಹಳ್ಳಿ ತಿರುವಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿಯೊಂದಿಗೆ, ಭೀಕರ ಅವಘಡದಿಂದ ಮೃತ್ಯುವಿ ಗೀಡಾಗಿರುವ ಇಬ್ಬರು ಚಾಲಕರ ಕುಟುಂಬಗಳಿಗೆ ತುರ್ತಾಗಿ ತಲಾ ರೂ. 15 ಸಾವಿರ ಪರಿಹಾರ ಕಲ್ಪಿಸಲಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.ಬಸ್‍ಗಳ ಅವಘಡ ಬೇರೊಂದು ವಾಹನವನ್ನು ಹಿಂದಿಕ್ಕುವ ವೇಳೆಯಲ್ಲೇ ಸಂಭವಿಸಿದ್ದು, ಉಭಯ ಬಸ್‍ಗಳ ಬ್ರೇಕ್ ಇತ್ಯಾದಿ ಸುಸ್ಥಿತಿಯಲ್ಲೇ ಇದ್ದುದಾಗಿ ಸಾರಿಗೆ ಇಲಾಖೆ ಮೂಲಗಳು ಖಚಿತಪಡಿಸಿದೆ.ಅಲ್ಲದೆ ಈ ಅವಘಡದಲ್ಲಿ ಘಾಸಿಗೊಂಡಿರುವ ಉಭಯ ಬಸ್‍ಗಳ ನಿರ್ವಾಹಕರ ಸಹಿತ ಗಾಯಾಳುಗಳ ಚಿಕಿತ್ಸೆಯ ತುರ್ತು ಖರ್ಚು ರೂ. 35 ಸಾವಿರದಷ್ಟು ಹಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಭರಿಸಲಾಗಿದೆ.

ಮೈಸೂರು ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದ ಶಾಂತಿ ಎಂಬವರ ಖರ್ಚು ರೂ. 28 ಸಾವಿರ ಕೂಡ ಭರಿಸಲಾಗಿದ್ದು, ಮುಂದೆ ವಿಮಾ ಹಣವನ್ನು ಕಲ್ಪಿಸಲು ಇಲಾಖೆ ಕಾರ್ಯಪ್ರವೃತ್ತಗೊಂಡಿದೆ.

ಇನ್ನು ಎರಡು ಬಸ್‍ಗಳು ತೀವ್ರ ಜಖಂಗೊಂಡಿರುವ ಹಿನ್ನೆಲೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಮುಖ್ಯಸ್ಥರ ಅನುಮತಿಯೊಂದಿಗೆ ಮುಂದೆ ದುರಸ್ತಿಗೊಳಿಸುವ ಸಲುವಾಗಿ ಪತ್ರ ವ್ಯವಹಾರ ನಡೆಸಲಾಗುತ್ತಿದೆ ಎಂದು ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾ ಖಚಿತಪಡಿಸಿದ್ದಾರೆ.