ಮಡಿಕೇರಿ, ಫೆ. 16: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ನಿಸರ್ಗ ರಮಣೀಯ ಪ್ರವಾಸಿ ತಾಣ ಮಾಂದಲಪಟ್ಟಿಯಲ್ಲಿ ವಾಹನ ನಿಲುಗಡೆ ಶುಲ್ಕ ಬಾಬ್ತು ಪ್ರಸಕ್ತ ಸಾಲಿಗೆ ರೂ. 11,52,500 ಮೊತ್ತಕ್ಕೆ ಹರಾಜುಗೊಂಡಿದೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಮೂವರು ಬಿಡ್ಡುದಾರರು ಪಾಲ್ಗೊಂಡಿದ್ದು, ಟಿ.ಎಂ. ತಿಮ್ಮಯ್ಯ ಎಂಬವರು ಮೇಲಿನ ಮೊತ್ತಕ್ಕೆ ಗ್ರಾ.ಪಂ.ನಿಂದ ಗುತ್ತಿಗೆ ಪಡೆದಿದ್ದಾರೆ.ಕಳೆದ ಸಾಲಿನಲ್ಲಿ ರೂ. 11.50 ಲಕ್ಷಕ್ಕೆ ಹರಾಜಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕುಶಾಲನಗರ ಬಳಿ ನಂಜರಾಯಪಟ್ಟಣ ಪ್ರಾ.ಪಂ. ವ್ಯಾಪ್ತಿಯ ದುಬಾರೆ ಪ್ರವಾಸಿ ತಾಣ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತಾಗಿದೆ. ಅದೇ ರೀತಿ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಈ ನಿಸರ್ಗ ರಮಣೀಯ ತಾಣ ಮಾಂದಲಪಟ್ಟಿ ಕೂಡ ಬೆಳವಣಿಗೆ ಕಾಣುವಂತಾಗಿದೆ.

ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ, ಉಪಾಧ್ಯಕ್ಷೆ ರಾಣಿ ಮುತ್ತಣ್ಣ, ಗ್ರಾ.ಪಂ. ಅಧಿಕಾರಿ ಶಶಿಕಿರಣ್ ಸೇರಿದಂತೆ ಪಂಚಾಯಿತಿ ಪ್ರತಿನಿಧಿಗಳು, ಬಿಡ್‍ದಾರರು, ಗ್ರಾಮಸ್ಥರು ಹರಾಜು ಪ್ರಕ್ರಿಯೆ ವೇಳೆ ಹಾಜರಿದ್ದರು. ಪ್ರಸಕ್ತ ಮಾಂದಲಪಟ್ಟಿ ರಸ್ತೆ ಹಾಳಾಗಿರುವ ಕಾರಣದಿಂದ ಸಾಕಷ್ಟು ವಿವಾದಗಳಿಗೂ ಈ ಪ್ರದೇಶ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.