ಸೋಮವಾರಪೇಟೆ, ಫೆ. 17: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 23 ವಾಣಿಜ್ಯ ಮಳಿಗೆಗಳು ಖಾಲಿ ಇದ್ದು, ಇದರಿಂದ ಸರ್ಕಾರದ ಆದಾಯಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಪ.ಪಂ. ಸದಸ್ಯರು ಗಮನ ಸೆಳೆದ ಹಿನ್ನೆಲೆ, ತಕ್ಷಣ ವಾಣಿಜ್ಯ ಮಳಿಗೆಗಳ ಹರಾಜಿಗೆ ಕ್ರಮ ಕೈಗೊಳ್ಳುವಂತೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮುಖ್ಯಾಧಿಕಾರಿಗೆ ಸೂಚಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಬಿ.ಎಸ್.ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆಯಿತು.

ಅನೇಕ ವರ್ಷಗಳಿಂದ ವಾಣಿಜ್ಯ ಮಳಿಗೆಗಳು ಹಾಗೆಯೇ ಉಳಿದು ಕೊಂಡಿರುವ ಬಗ್ಗೆ ನಾಮನಿರ್ದೇಶಿತ ಸದಸ್ಯ ಇಂದ್ರೇಶ್‍ವರು ಸಭೆಯ ಗಮನ ಸೆಳೆದರು. ಮುಂಗಡ ಹಣ ಮತ್ತು ಬಾಡಿಗೆ ಹೆಚ್ಚು ಇರುವ ಹಿನ್ನೆಲೆಯಲ್ಲಿ ವರ್ತಕರು ಬರುತ್ತಿಲ್ಲ ಎಂದು ಮುಖ್ಯಧಿಕಾರಿ ನಾಚಪ್ಪ ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸರ್ಕಾರ ನಿಗದಿಪಡಿಸಿದ ದರದ ಅನ್ವಯ ಬಹಿರಂಗ ಹರಾಜಿನಲ್ಲಿ ವರ್ತಕರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಠೇವಣಿ ಮತ್ತು ಬಾಡಿಗೆಯನ್ನು ಕಡಿಮೆ ಮಾಡುವಂತೆ ಸೂಚಿಸಿದರು. ಈಗಾಗಲೇ ಪಂಚಾಯಿತಿಗೆ ಆದಾಯ ಕುಂಠಿತಗೊಂಡು ಸರಕಾರಕ್ಕೆ ನಷ್ಟ ಎದುರಾಗಿದೆ. ತಕ್ಷಣವೆ ಬಹಿರಂಗ ಹರಾಜು ಮಾಡಲು ಪ್ರಕಟಣೆ ನೀಡುವಂತೆ ಸೂಚಿಸಿದರು.

ಪಟ್ಟಣದ ದುದ್ದುಗಲ್ ನೀರು ಸರಬರಾಜು ಕೇಂದ್ರದಲ್ಲಿ ಕೆಲಸ ನಿರ್ವಹಿಸಲು ಪಂಪ್ ಆಪರೇಟರ್‍ಗಳ ಅವಶ್ಯಕತೆ ಇದೆ ಎಂದು ಸದಸ್ಯರು ತಿಳಿಸಿದ ಮೇರೆ, ಹೊರಗುತ್ತಿಗೆಯಡಿ ಟೆಂಡರ್ ಮೂಲಕ ನೇಮಿಸಿಕೊಳ್ಳಲು ಶಾಸಕರು ಸಲಹೆ ನೀಡಿದರು.

ಆದರೆ ಸರಕಾರದ ಸುತ್ತೋಲೆಯ ಪ್ರಕಾರ ಸೋಮವಾರಪೇಟೆ ಪ.ಪಂ. ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪೌರಕಾರ್ಮಿಕನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸಾದ್ಯವಿಲ್ಲ ಎಂದು ಮುಖ್ಯಧಿಕಾರಿ ಪಿ.ನಾಚಪ್ಪ ಸಭೆಗೆ ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳುವಂತೆ ಶಾಸಕರು ಸೂಚಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಗೆ ಸೂಕ್ತ ಜಾಗವನ್ನು ಗುರುತಿಸಿ, ಕಾಮಗಾರಿ ಪ್ರಾರಂಭಿಸುವಂತೆ ಶಾಸಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರಿಗೆ ಸೂಚಿಸಿದರು.

ಪಟ್ಟಣದ ನೇತಾಜಿ ಉದ್ಯಾನವನದಲ್ಲಿರುವ ವಸತಿ ಗೃಹವು ಶಿಥಿಲಾವಸ್ಥೆಯಲ್ಲಿದ್ದು ಅದನ್ನು ದುರಸ್ತಿ ಪಡಿಸುವಂತೆ ಸದಸ್ಯೆ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್ ಮನವಿ ಮಾಡಿದರು. ಪಟ್ಟಣದ ಕುಡಿಯುವ ನೀರಿನ ಮೂಲವಾಗಿದ್ದ ಆನೆಕೆರೆ ಇಂದು ಸಂಪೂರ್ಣ ಬರಿದಾಗಿದ್ದು, ಅದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳ ಬೇಕೆಂದು ಸದಸ್ಯ ಬಿ.ಜಿ.ಇಂದ್ರೇಶ್ ಶಾಸಕರಿಗೆ ಮನವಿ ಮಾಡಿದರು.

ಪಟ್ಟಣದ ವಲ್ಲಭಬಾಯಿ ಬಡಾವಣೆಗೆ ತೆರಳುವ ರಸ್ತೆ ಸಂಪೂರ್ಣ ಗುಂಡಿಬಿದ್ದಿದ್ದು, ನಡೆದಾಡಲೂ ಸಹ ತೊಂದರೆ ಎದುರಾಗಿದೆ. ಇದರಿಂದ ಸಾರ್ವ ಜನಿಕರು ಸಮಸ್ಯೆ ಎದುರಿಸುತ್ತಿದ್ದು, ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಆ ವಾರ್ಡ್‍ನ ಸದಸ್ಯೆ ಮೀನಕುಮಾರಿ ಮನವಿ ಮಾಡಿದರು

ರಸ್ತೆ ಬದಿ ವ್ಯಾಪಾರ ಮಾಡುವ ವರ್ತಕರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತಿದೆ. ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದ್ದು, ಇದರ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಗಮನಹರಿಸ ಬೇಕೆಂದು ಸದಸ್ಯ ಬಿ.ಜಿ.ಇಂದ್ರೇಶ್ ಒತ್ತಾಯಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.