ಸೋಮವಾರಪೇಟೆ, ಫೆ. 17: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ಕೇವಲ 12 ರೂಪಾಯಿಗಳ ಪ್ರೀಮಿಯಂ ಪಾವತಿಸಿದ್ದ ಫಲಾನುಭವಿಯೋರ್ವರಿಗೆ ಯೋಜನೆಯಡಿ ಬಿಡುಗಡೆಯಾದ ರೂ. 2 ಲಕ್ಷ ವಿಮಾ ಚೆಕ್‍ನ್ನು ವಿತರಿಸ ಲಾಯಿತು. ಸಮೀಪದ ತೋಳೂರುಶೆಟ್ಟಳ್ಳಿ ಯಡದಂಟೆ ಗ್ರಾಮದ ಎಂ.ಡಿ. ಮಾದಪ್ಪ ಅವರು ಕಳೆದ ವರ್ಷ ತೋಟದಲ್ಲಿ ಕೆಲಸ ನಿರ್ವಹಿಸುವ ಸಂದರ್ಭ ಎದುರಾದ ದುರ್ಘಟನೆಯಲ್ಲಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಇದಕ್ಕೂ ಮೊದಲು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ತೋಳೂರುಶೆಟ್ಟಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ವಾರ್ಷಿಕ ರೂ. 12 ಪ್ರೀಮಿಯಮ್ ಪಾವತಿಸಿದ್ದರು. ಯೋಜನೆಯಡಿ ಬಿಡುಗಡೆಯಾದ ರೂ. 2 ಲಕ್ಷ ಮೊತ್ತದ ಚೆಕ್‍ನ್ನು ಬ್ಯಾಂಕಿನ ವ್ಯವಸ್ಥಾಪಕ ರಘುಚಂದ್ರ ಅವರು ಮಾದಪ್ಪ ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.