ಮಡಿಕೇರಿ, ಫೆ. 17 : ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು ಮತ್ತು ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಲ್ಲೊಂದಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ತಾ. 21ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 21 ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಕಾರಣ ಸತ್ಯಾಗ್ರಹವನ್ನು ನಡೆಸುತ್ತಿರುವದಾಗಿ ಹೇಳಿದರು. ಆಕ್ಸ್‍ಫರ್ಡ್ ಡಿಕ್ಷನರಿಯು ಪ್ರತೀವರ್ಷ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದು, ಈ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವದರ ಮೂಲಕ ಕೊಡವ ಭಾಷೆ ಮತ್ತು ಆಕ್ಸ್‍ಫರ್ಡ್ ಡಿಕ್ಷನರಿ ಎರಡನ್ನೂ ಸಮೃದ್ಧ ಮತ್ತು ಶ್ರೀಮಂತ ಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಒಟ್ಟು 14 ಹಕ್ಕೊತ್ತಾಯಗಳನ್ನು ಮಂಡಿಸಲಾಗುವದು ಎಂದು ಹೇಳಿದರು.

ಕೊಡವ ಭಾಷೆ ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಮತ್ತು ತುಳು ಭಾಷೆಗಳಿಗೆ ಮಾತೃ ಮೂಲ ಜೀವ ಸೆಲೆಯೆಂಬದನ್ನು ದಕ್ಷಿಣ ಹಿಂದುಸ್ಥಾನದ ಹೆಸರಾಂತ ಭಾಷಾ ತಜ್ಞ ಬ್ರಿಟಿಷ್ ಮೂಲದ ಬಿಷಪ್ ಕಾಲ್ಡ್‍ವೆಲ್ ತಮ್ಮ ಸಂಶೋಧನೆಯಲ್ಲಿ ದೃಢೀಕರಿಸಿದ್ದು, ಇಂತಹ ಒಂದು ಭಾಷೆ ಜಗತ್ತಿನ 196 ಆಪತ್ತಿನಲ್ಲಿರುವ ಭಾಷೆಗಳ ಪೈಕಿ ಒಂದು ಎಂಬ ಆತಂಕಕಾರಿ ವಿಚಾರವನ್ನು ವಿಶ್ವ ಸಂಸ್ಥೆ 2009ರಲ್ಲೇ ಪ್ರಕಟಿಸಿದೆ ಎಂದು ಹೇಳಿದರು.

ಭಾಷಾ ತಜ್ಞ ಪಂಡಿತ್ ಸೀತಾಕಾಂತ್ ಮಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ 2003ರಲ್ಲಿ ಕೇಂದ್ರ ಸರ್ಕಾರ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳ್ಳಲಿರುವ ಭಾಷೆಗಳ ಕುರಿತು ರಚಿಸಲಾದ ಸಮಿತಿ ಕೂಡ ಭಾರತದ 38 ಪ್ರಮುಖ ಭಾಷೆಗಳು 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳ್ಳಲು ಅರ್ಹತೆ ಪಡೆದಿವೆ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದು, ಅದರಲ್ಲಿ ಕೊಡವ ಭಾಷೆಗೆ 19 ನೇ ಸ್ಥಾನ ನೀಡಲಾಗಿದೆ ಎಂದು ಈ ಸಂದರ್ಭ ಸ್ಮರಿಸಿದರು.

ಕೊಡವ ಭಾಷೆ ಪ್ರಾಚೀನವೂ, ಸಮೃದ್ಧವೂ ಶ್ರೀಮಂತವೂ ಆಗಿರುವ ಸ್ವತಂತ್ರ ಜನಪದೀಯ ಭಾಷೆಯಾಗಿದ್ದು ಕೊಡಗಿನ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃ ಭಾಷೆಯಾಗಿದೆ. ಕೊಡವ ಭಾಷೆ ಭಾರತದ 16 ಪ್ರಧಾನ ಭಾಷೆಗಳಲ್ಲೊಂದೆಂಬುದನ್ನು ವಿಶ್ವ ವಿಖ್ಯಾತ ಸಮಾಜ ವಿಜ್ಞಾನಿಗಳು, ರಾಜಕೀಯ ವಿಜ್ಞಾನಿಗಳು, ಭಾಷಾ ವಿದ್ವಾಂಸರು, ಮಾನವ ಶಾಸ್ತ್ರಜ್ಞರು ಮತ್ತು ಶ್ರೇಷ್ಟ ಚಿಂತಕರಿಂದ ರಚಿಸಲ್ಪಡುತ್ತಿರುವ ಮನೋರಮ ಇಯರ್ ಬುಕ್‍ನಲ್ಲಿ ಕೂಡಾ ಸತತವಾಗಿ ದಾಖಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಲು ಬೇರ್ಯಾವದೇ ಮಾನದಂಡ ಅಥವಾ ಯಾರದೇ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ. ಸಂವಿಧಾನ ತಿದ್ದುಪಡಿಗೆ ಸಂಬಂಧ ಯಾವದೇ ರಾಜ್ಯದ ಶಾಸನ ಸಭೆ ಅಥವಾ ಕ್ಯಾಬಿನೆಟ್ ನಿರ್ಣಯದ ಅವಶ್ಯಕತೆಯೂ ಕಂಡು ಬರುವದಿಲ್ಲ ಎಂದು ಅವರು ಪ್ರತಿಪಾದಿಸಿದರು. ಈ ಸಂಬಂಧವಾಗಿ ಕೇಂದ್ರ ಸರಕಾರದ ಗಮನಸೆಳೆಯುವ ನಿಟ್ಟಿನಲ್ಲಿ ಸಂಘಟನೆಯು ತಾ. 21ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಿ ಸಂಬಂಧಿಸಿದವರಿಗೆ ಜ್ಞಾಪನಾಪತ್ರ ಸಲ್ಲಿಸಲಿದೆ ಎಂದು ಹೇಳಿದರು.

ಅಲ್ಲದೆ ಇದೇ ಸಂದರ್ಭ ಕೊಡವ ಭಾಷೆಗೆ ಸಂಬಂಧಿಸಿದಂತೆ 14 ಪ್ರಧಾನ ಬೇಡಿಕೆಗಳು ಮತ್ತು ಹಕ್ಕೊತ್ತಾಯ ಗಳನ್ನು ಮಂಡಿಸಲಾಗುವದೆಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂಬಂಡ ಜನತ್, ಪುಲ್ಲೇರ ಕಾಳಪ್ಪ ಮತ್ತು ಅರೆಯಡ ಗಿರೀಶ್ ಉಪಸ್ಥಿತರಿದ್ದರು.