ಶ್ರೀಮಂಗಲ, ಫೆ. 17: ಕಳೆದ ಹಲವು ವರ್ಷಗಳಿಂದ ಬಾಳೆಲೆ, ಮಾಯಮುಡಿ, ಕೊಟ್ಟಗೇರಿ ವ್ಯಾಪ್ತಿಯಲ್ಲಿ ಹುಲಿ ಧಾಳಿ ನಿರಂತರವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗಿದ್ದರೂ ಹುಲಿ ಧಾಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಹುಲಿ ಧಾಳಿಯನ್ನು ನಿಯಂತ್ರಿಸುವದಾಗಿ ಭರವಸೆ ನೀಡಿರುವ ಅರಣ್ಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಪರಿಣಾಮ ಮತ್ತೆ ಹುಲಿ ಧಾಳಿ ನಡೆಯುತ್ತಿದ್ದು, ರೈತರ ಸಾಕು ಪ್ರಾಣಿ, ಹಸುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ದಿನಗಳ ಹಿಂದೆ ಧನುಗಾಲದಲ್ಲಿ ಹೈನುಗಾರಿಕೆ ಯಿಂದ ಜೀವನೋಪಾಯ ನಡೆಸುತ್ತಿದ್ದ ಮುರುಡೇಶ್ವರ (ಮುರುಳಿ) ಅವರ 3 ಹಸುಗಳನ್ನು ಹುಲಿ ಸಾಯಿಸಿರುವದಲ್ಲದೇ ಇದೀಗ ಮತ್ತೆ ಕೊಟ್ಟಗೇರಿಯಲ್ಲಿ ಹುಲಿ ಧಾಳಿಗೆ 1 ಹಸು ಬಲಿಯಾಗಿದೆ.
ಅರಣ್ಯ ಇಲಾಖೆಯಿಂದ ಪರ್ಯಾಯ ರೂಪದಲ್ಲಿ ಒಂದು ಹಸುವಿಗೆ ರೂ. 10 ಸಾವಿರ ನಿಗದಿ ಮಾಡಿದ್ದು ಅವೈಜ್ಞಾನಿಕವಾಗಿದೆ. ಒಂದು ಹಸುವಿಗೆ ಕನಿಷ್ಟ ರೂ. 1 ಲಕ್ಷ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಜನಾಂಗ ಅತೀ ಹೆಚ್ಚು ವಾಸವಾಗಿದ್ದು, ಈ ಭಾಗದಿಂದ ಸಾಕಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯ ಮುಖಾಂತರವೇ ತೆರಳಬೇಕಾಗಿ ರುವದರಿಂದ ಹುಲಿ ಧಾಳಿಯಿಂದ ನಾಗರಿಕರು ಭಯಭೀತರಾಗಿದ್ದು, ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಹುಲಿ ಸೆರೆಗೆ ಕಾರ್ಯಪ್ರವೃತ್ತರಾಗಬೇಕು. ತಪ್ಪಿದಲ್ಲಿ ಈ ಭಾಗದ ಸಾರ್ವಜನಿಕರು, ಸಂಘ-ಸಂಸ್ಥೆ ಎಲ್ಲರನ್ನೂ ಒಗ್ಗೂಡಿಸಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಸಿದ್ದಾರೆ.