ಮಡಿಕೇರಿ, ಫೆ. 17: ಕೃಷಿ ಪ್ರಧಾನವಾದ ಜಿಲ್ಲೆ ಕೊಡಗು. ಆದರೆ, ವಿವಿಧ ಕೃಷಿ ಫಸಲಿನ ನಡುವೆ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು ‘ಕಾಫಿ’ ನವೆಂಬರ್‍ನಿಂದ ಮಾರ್ಚ್ ತಿಂಗಳ ತನಕ ಕಾಫಿ ಕೆಲಸದ ಪರ್ವಕಾಲ ಕೊಡಗಿನಲ್ಲಿ ಸಾಮಾನ್ಯ. ಮುಂದಿನ ವರ್ಷದ ಫಸಲನ್ನು ನಿರ್ಧರಿಸುವ ಕಾಫಿ ಹೂ ಮಳೆ ಬೆಳೆಗಾರರಲ್ಲಿ ಒಂದಷ್ಟು ಹುಮ್ಮಸ್ಸು ಮೂಡಿಸುತ್ತದೆ. ಕಳೆದ ವರ್ಷ ಅಕಾಲಿಕ ರೀತಿ ಯಾದರೂ ಇಡೀ ಜಿಲ್ಲೆಯಾದ್ಯಂತ ಜನವರಿ ಕೊನೆಯ ವಾರದಲ್ಲಿ ಒಂದೆರಡು ದಿನ ನಿರಂತರವಾಗಿ ಅಗತ್ಯ ಪ್ರಮಾಣದ ಹೂ ಮಳೆಯಾಗಿದ್ದು, ಇಡೀ ಜಿಲ್ಲೆಯಲ್ಲಿ ಹಲವು ವರ್ಷಗಳ ಬಳಿಕ ಏಕಕಾಲಕ್ಕೆ ಕಾಫಿ ಹೂ ಘಮ ಘಮಿಸಿತ್ತು.

ಈ ಬಾರಿ ಕಳೆದ ಎಂಟು ದಿನದಿಂದ ಜಿಲ್ಲೆಯ ಗಡಿಭಾಗವಾದ ಪರಕಟಗೇರಿ, ತೆರಾಲು, ಬಿರುನಾಣಿ, ಬಾಡಗರಕೇರಿ, ಬಿ. ಶೆಟ್ಟಿಗೇರಿ, ಬೀರುಗ, ಕುರ್ಚಿ ಸೇರಿದಂತೆ ದಕ್ಷಿಣ ಕೊಡಗಿನ ಹಲವು ಗ್ರಾಮಗಳು ವರ್ಷದ ಪ್ರಥಮ ಮಳೆ ಕಂಡಿವೆ. ಕೆಲವೆಡೆ 65 ಸೆಂಟ್ ನಿಂದ ಒಂದು ಇಂಚಿನಷ್ಟು ಮಳೆ ಸುರಿದಿದ್ದು, ಇನ್ನು ಹಲವೆಡೆ ಗಳಲ್ಲಿ ಮಳೆಯ ಪ್ರಯಾಣ ಇಳಿಮುಖವಾಗಿತ್ತು.

ಕಳೆದ ಅಕ್ಟೋಬರ್ - ನವೆಂಬರ್‍ನಲ್ಲಿ ಸುರಿದ ಮಳೆಯ ಪ್ರಭಾವವೋ ಅಥವಾ ಪ್ರಸಕ್ತ ಸಾಲಿನಲ್ಲಿ ಫಸಲು ಕಡಿಮೆ ಇದ್ದ ಪರಿಣಾಮವೋ ಗೊತ್ತಿಲ್ಲ. ಮಳೆಯಾದ ಪ್ರದೇಶಗಳಲ್ಲಿ ಇಂದು ಕಾಫಿ ಹೂ ಅರಳಿದ್ದು, ತನ್ನ ಪರಿಮಳ ಸೂಚಿಸಿದೆ. ಮಳೆ ತುಸು ಹೆಚ್ಚು ಬಿದ್ದಿರುವ ವ್ಯಾಪ್ತಿಯ ರೈತರು ಸದ್ಯದ ಮಟ್ಟಿಗೆ ಒಂದಷ್ಟು ನಿರಾಶವಾಗಿದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ಪ್ರದೇಶದ ಬೆಳೆಗಾರರು ಇದಕ್ಕೆ ಪೂರಕವಾಗಿ ತೋಟಗಳಿಗೆ ನೀರು ಹಾಯಿಸಿ ಮುಂದಿನ ಫಸಲು ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ.

ನಾಪೋಕ್ಲು : ಕಾಫಿಯ ಕಣಜ ಕೊಡಗಿನಲ್ಲಿ ಈಗಷ್ಟೆ ಕಾಫಿ ಕೊಯ್ಲಿನ ಕೆಲಸ ಮುಗಿದಿದೆ. ಆದರೆ ಪಾರಾಣೆ ಕೊಣಂಜಗೇರಿ ಗ್ರಾ.ಪಂ.ವ್ಯಾಪ್ತಿಯ ಕಿರುಂದಾಡು ಗ್ರಾಮದ ಕೆಲವು ತೋಟಗಳಲ್ಲಿ ಕಾಫಿ ಹೂವುಗಳು ಅರಳಿ ಸುವಾಸನೆ ಬೀರುತ್ತಿದ್ದರೆ ಇನ್ನು ಕೆಲವು ತೋಟಗಳಲ್ಲಿ ಕಾಫಿ ಮೊಗ್ಗುಗಳು ಅರಳಿ ಕಂಪು ಸೂಸುತ್ತಿವೆ.

ಕಾಫಿ ಕೊಯ್ಲಿನ ಸಮಯದಲ್ಲಿ ಕಾರ್ಮಿಕರ ಕೊರತೆ ಕಾಫಿ ಬೆಳೆಗಾರರನ್ನು ಕಾಡುವದು ಸಹಜ. ಮತ್ತೊಂದೆಡೆಯಲ್ಲಿ ಕಾಫಿ ಹಣ್ಣುಗಳು ಗಿಡದಲ್ಲೇ ಒಣಗಿ ಹೋಗುವ ಮುನ್ನ ಕಾಫಿ ಕೊಯ್ಲು ಮುಗಿಯಬೇಕಾಗಿದೆ. ಅತಿ ಹೆಚ್ಚು ಅರೆಬಿಕಾ ಕಾಫಿ ಬೆಳೆಯುವ ಉತ್ತರ ಕೊಡಗಿನಲ್ಲಿ ಅರೆಬಿಕಾ ಕಾಫಿ ಕೊಯ್ಲು ಸಂಪೂರ್ಣ ಮುಗಿದಿದ್ದು, ರೋಬಸ್ಟಾ ಕಾಫಿ ಬೆಳೆಯುವ ದಕ್ಷಿಣ ಕೊಡಗಿನಲ್ಲಿ ಕೆಲವೆಡೆಗಳ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನ ಕೆಲಸ ಸಾಗುತ್ತಿದ್ದರೆ, ಮತ್ತೆ ಕೆಲವೆಡೆಗಳಲ್ಲಿ ಈಗಷ್ಟೇ ಕಾಫಿ ಕೊಯ್ಲು ಕಾರ್ಯ ಮುಗಿದಿದೆ. ಆದರೆ ಕಿರುಂದಾಡು ಗ್ರಾಮದ ಕೆಲವು ತೋಟಗಳಲ್ಲಿ ಕಾಫಿ ಹೂವು ಅರಳಿದ್ದರೆ ಮತ್ತೆ ಕೆಲವು ತೋಟಗಳಲ್ಲಿ ಕಾಫಿ ಮೊಗ್ಗು ಅರಳುತ್ತಿವೆ. ಕಾಫಿ ಕೊಯ್ಲಿನ ನಂತರ ಮಳೆ ಬಂದು ಹೂವು ಅರಳುವದು ಸಹಜ. ಒಮ್ಮೆ ಮಳೆ ಬಂದು ಕಾಫಿ ಹೂವು ಅರಳಿದ ನಂತರ ಮತ್ತೇ ಮಳೆ ಬಂದರೆ ಮಾತ್ರ ಕಾಫಿ ಹೂವು ಕಚ್ಚಿಕೊಳ್ಳುತ್ತವೆ ಇಲ್ಲದಿದ್ದಲ್ಲಿ ಕಾಫಿ ಹೂವು ಬಾಡಿ ಫಸಲು ಕಡಿಮೆಯಾಗುತ್ತದೆ. ಇದರಿಂದಾಗಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುತ್ತದೆ.

ಅಕಾಲಿಕ ಮಳೆಯಾಗಿ ಫಸಲು ನಾಶವಾಗುವದನ್ನು ತಪ್ಪಿಸಲು ನೀರಿನ ಸೌಲಭ್ಯ ಇರುವ ಕಾಫಿ ಬೆಳೆಗಾರರು ಸ್ಪ್ರಿಂಕ್ಲರ್ ಮೂಲಕ ನೀರನ್ನು ಹಾಯಿಸುವದರಿಂದ ಕಾಫಿ ಹೂವುಗಳು ಅರಳಿ ಕಾಫಿ ಇಳುವರಿಯು ಅಧಿಕವಾಗುತ್ತದೆ. ಕಿರುಂದಾಡು ಗ್ರಾಮದಲ್ಲಿ ಸ್ಪ್ರಿಂಕ್ಲರ್ ಮೊರೆ ಹೊಕ್ಕಿರುವ ಕಾಫಿ ಬೆಳೆಗಾರರು ತೋಟದ ಕಾಫಿ ಗಿಡಗಳಿಗೆ ನೀರು ಹಾಯಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮದ ಕೆಲವು ತೋಟಗಳಲ್ಲಿ ಹೂವುಗಳು ಅರಳಿ ಸುವಾಸನೆ ಬೀರುತ್ತಿವೆ. ಮಳೆಯನ್ನು ಅವಲಂಬಿಸದೆ, ಸ್ಪ್ರಿಂಕ್ಲರ್ ಮೂಲಕ ಕಾಫಿ ತೋಟಗಳಿಗೆ ನೀರು ಹಾಯಿಸುವದರಿಂದ ಉತ್ತಮ ಇಳುವರಿಯೊಂದಿಗೆ ಸರಾಸರಿ ಫಸಲು ಬೆಳೆಗಾರರ ಕೈಸೇರಲಿದೆ.