ಮಡಿಕೇರಿ, ಫೆ. 16: ಉನ್ನತ ಶಿಕ್ಷಣದ ಮೂಲಕ ಗುರಿ ಸಾಧಿಸಿ ಆರ್ಥಿಕವಾಗಿ ಸಧೃಡರಾದಾಗ ಮಾತ್ರ ಮಹಿಳೆಯರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಸಾಧ್ಯ ಎಂದು ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.ಸಂವಿಧಾನ ಜಾರಿಗೆ ಬಂದ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿಗಳಿ ಗಾಗಿ ಆಯೋಜಿಸಲಾಗಿದ್ದ “ಸ್ಫೂರ್ತಿ ದಿವಸ” ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್‍ಪಿ ಮಾತನಾಡಿದರು.ಮಹಿಳೆಯರು ಹಿಂದಿನ ಕಾಲದಿಂದಲೂ ಇತರರಿಗೆ ಅವಲಂಬಿತರಾಗಿ ಬದುಕು ಸಾಗಿಸುತ್ತಿದ್ದು, ಈ ವ್ಯವಸ್ಥೆಯಿಂದ ಮುಕ್ತರಾಗಬೇಕಾದರೆ ಉತ್ತಮ ಶಿಕ್ಷಣವನ್ನು ಪಡೆಯಬೇಕೆಂದು ಕರೆ ನೀಡಿದರು. ವಿದ್ಯಾರ್ಥಿನಿಯರು ತಮ್ಮ ಶೈಕ್ಷಣಿಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವ ಮೂಲಕ ಸ್ವಾಭಿ ಮಾನದ ಬದುಕು ಸಾಗಿಸಬೇಕೆಂದರು.

ಡಿವೈಎಸ್‍ಪಿ ಸುಂದರರಾಜ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಓದು ಎಂಬವದು ಆಸ್ತಿಯಾಗಿತ್ತು, ಆದರೆ ನಿರ್ದಿಷ್ಟ ಗುರಿ, ಉದ್ದೇಶಗಳಿರಲಿಲ್ಲ. ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳೊಂದಿಗೆ ವಿದ್ಯಾರ್ಥಿಗಳ ಆಲೋಚನಾ ಲಹರಿಯೂ ಬದಲಾಗಿದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ಮಾತನಾಡಿ ವಿದ್ಯಾರ್ಥಿಗಳು ಒಂದು ಸೀಮಿತ ಶಿಕ್ಷಣಕ್ಕಷ್ಟೇ ತಮ್ಮ ವಿದ್ಯಾರ್ಥಿ ಜೀವನವನ್ನು ಮೀಸಲಿಡದೆ ಉನ್ನತ ಅಧಿಕಾರಿಯಾಗಿ ಸಮಾಜವನ್ನು ಬದಲಾಯಿಸುವ ಗುರಿ ಹೊಂದುವ ರೀತಿಯಲ್ಲಿ ಶಿಕ್ಷಣದ ಗುರಿ ಸಾಧಿಸಬೇಕೆಂದರು.

ಗಾಳಿಬೀಡುವಿನ ಸಮಾಜ ಸೇವಕರು ಹಾಗೂ ದಾನಿಗಳಾದ ಟಿ.ಆರ್. ವಾಸುದೇವ್ ಮಾತನಾಡಿದರು.

ಇದೇ ಸಂದರ್ಭ ಸ್ಪರ್ಧಾತ್ಮಕ ಪರಿಕ್ಷೇಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ತೃತೀಯ ಬಿ.ಕಾಂ. ವಿದ್ಯಾರ್ಥಿ ಕೆ.ಸಿ. ಸಿಂಚನ, ದ್ವಿತೀಯ ಟಿ.ಎಲ್. ಕಾವ್ಯಶ್ರೀ (ತೃತೀಯ ಬಿ. ಕಾಂ), ತೃತೀಯ ಸ್ಥಾನ ಹೆಚ್.ಎಲ್. ನವ್ಯ (ತೃತೀಯ ಬಿ.ಕಾಂ) ಅವರು ಪಡೆದುಕೊಂಡರು.

ಕಾಲೇಜಿನ ಪ್ರಾಂಶುಪಾಲೆ ಡಾ. ಜೆನಿಫರ್ ಲೋಲಿಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವ್ಯಾಂಡಮ್ ಎಂಟರ್ ಪ್ರೈಸಸ್‍ನ ಮಾಲೀಕ ಕೆ.ಕೆ.ದಾಮೋದರ್, ಮೈಸೂರು ಸಿಲ್ಕ್ಸ್ ಎಂಪೋರಿಯಂನ ಮಾಲೀಕ ಹೆಚ್.ಎನ್.ಮೊಯಿದೀನ್ ಇಬ್ರಾಹಿಂ, ದಸಂಸ ಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ತಾಲೂಕು ಸಂಚಾಲಕರಾದ ಹೆಚ್.ಎಲ್. ಕುಮಾರ್, ರವಿ ಮತ್ತಿತರರು ಉಪಸ್ಥಿತರಿದ್ದರು.