ಪೊನ್ನಂಪೇಟೆ, ಫೆ. 17: ಕರ್ನಾಟಕ ವಿಧಾನ ಪರಿಷತ್ ಮಾಜಿ ಪ್ರತಿಪಕ್ಷ ನಾಯಕ, ಹಿರಿಯ ಹೋರಾಟಗಾರ ಮತ್ತು ರಾಜಕಾರಣಿ ಅಜ್ಜಿಕುಟ್ಟೀರ ಕಾರ್ಯಪ್ಪ ಸುಬ್ಬಯ್ಯ ಅವರಿಗೆ ತಾ. 25 ರಂದು ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಎ.ಕೆ. ಸುಬ್ಬಯ್ಯರವರ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಂದು ಸಂಜೆ 5 ಗಂಟೆಗೆ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ದಾರಿದೀಪ’ ಹೆಸರಿನ ಅಭಿನಂದನಾ ಗ್ರಂಥವನ್ನು ಎ.ಕೆ. ಸುಬ್ಬಯ್ಯ ಅವರಿಗೆ ಸಮರ್ಪಿಸಲಿದ್ದಾರೆ. ಅಭಿನಂದನಾ ಸಮಿತಿ ಅಧ್ಯಕ್ಷ ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಎ.ಕೆ. ಸುಬ್ಬಯ್ಯ ಅವರ ಸಮಗ್ರ ಬರಹಗಳ ಗ್ರಂಥ ‘ಸೌಹಾರ್ದ ಸೆಲೆ’ಯನ್ನು ಸಾಹಿತಿ ಪದ್ಮಶ್ರೀ ದೇವನೂರು ಮಹದೇವ ಬಿಡುಗಡೆಗೊಳಿಸಲಿದ್ದಾರೆ. ಎ.ಕೆ. ಸುಬ್ಬಯ್ಯ ಅವರ ಜೀವನ ಚರಿತ್ರೆ ‘ನಿರ್ಭೀತಿಯ ಹೆಜ್ಜೆಗಳು’ ಪುಸ್ತಕವನ್ನು ರೈತ ನಾಯಕ ಚುಕ್ಕಿ ನಂಜುಂಡಸ್ವಾಮಿ ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್, ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಕೆ.ಜೆ. ಜಾರ್ಜ್ ಮತ್ತು ಮಾಜಿ ಸಚಿವ ಯಂ.ಸಿ. ನಾಣಯ್ಯ ಪಾಲ್ಗೊಳ್ಳಲಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಎ.ಕೆ. ಸುಬ್ಬಯ್ಯ ಅವರ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆ ಸುಬ್ಬಯ್ಯ ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ತಿಳಿಸಿದ್ದಾರೆ.