ಸೋಮವಾರಪೇಟೆ, ಫೆ. 17: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರು ಕಟ್ಟೆಯಲ್ಲಿ ನೂತನವಾಗಿ ಒಕ್ಕಲಿಗರ ಸಂಘವನ್ನು ರಚಿಸಲಾಗಿದ್ದು, ಸಮುದಾಯ ಬಾಂಧವರ ಸಮ್ಮುಖದಲ್ಲಿ ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೂತನ ಸಂಘವನ್ನು ಉದ್ಘಾಟಿಸಿದರು.ನೇರುಗಳಲೆ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘಕ್ಕೆ ಚಾಲನೆ ನೀಡಿದ ಸ್ವಾಮೀಜಿಗಳು, ಒಕ್ಕಲಿಗರು ತಮ್ಮೊಳಗಿನ ಕಿತ್ತಾಟವನ್ನು ಬದಿಗಿಟ್ಟು ಸಾಮಾಜಿಕವಾಗಿ ಸಂಘಟಿತರಾಗುವ ಮೂಲಕ ದೇಶ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದಕ್ಕೂ ಮುನ್ನ ಸ್ವಾಮೀಜಿಗಳನ್ನು ಅಬ್ಬೂರುಕಟ್ಟೆ ಜಂಕ್ಷನ್‍ನಿಂದ ಬೆಳ್ಳಿ ರಥದ ಮೂಲಕ ಮೆರವಣಿಗೆಯಲ್ಲಿ ಕರೆತಂದ ಒಕ್ಕಲಿಗ ಬಾಂಧವರು, ಡೊಳ್ಳು, ಕಹಳೆಯೊಂದಿಗೆ ಸ್ವಾಗತಿಸಿದರು. ಒಕ್ಕಲಿಗ ಸಮುದಾಯದ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಮೀಜಿ ಗಳನ್ನು ಕಾರ್ಯಕ್ರಮಕ್ಕೆ ಕರೆತಂದರು.

ಸಂಘವನ್ನು ದಿವ್ಯಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಸ್ವಾಮೀಜಿ, ಒಂದೇ ಸಂಸ್ಕøತಿ, ಆಚಾರ-ವಿಚಾರಗಳನ್ನು ಹೊಂದಿರುವ ಸಮುದಾಯ ಒಂದಾದರೆ ಮಾತ್ರ ಜನಾಂಗದ ಉನ್ನತಿ ಸಾಧ್ಯ. ಹೀಗೆ ಜನಾಂಗಗಳ ಉನ್ನತಿಯಿಂದ ದೇಶ ಉತ್ತುಂಗದ ಪಥಕ್ಕೆ ತಲುಪುತ್ತದೆ. ಸಮುದಾಯದ ಬಗ್ಗೆ ಗರ್ವ ಪಡುವ ಬದಲು ಅಭಿಮಾನ ಹೊಂದಬೇಕು. ಅಭಿಮಾನಶೂನ್ಯರಾದರೆ ಯಾವದೇ ಜನಾಂಗದವರು ತಮ್ಮ ಬದುಕು ಕಟ್ಟಿಕೊಟ್ಟಲು ಸಾಧ್ಯವಾಗುವದಿಲ್ಲ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ

(ಮೊದಲ ಪುಟದಿಂದ) ಮಾತನಾಡಿದ ಮಾಜಿ ಸಚಿವ ಬಿ.ಎ. ಜೀವಿಜಯ, ಒಕ್ಕಲಿಗ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿನ್ನಡೆ ಅನುಭವಿಸಿದೆ. ಸಮಾಜವನ್ನು ಒಡೆಯುವ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಗುರುಪೀಠಗಳನ್ನು ಕೆಳಮಟ್ಟಕ್ಕೆ ತರುವ ಯತ್ನಗಳು ನಡೆಯುತ್ತಿವೆ. ಇಂತಹ ಕ್ರಮಕ್ಕೆ ಅಸ್ಪದ ನೀಡಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಅರೆಯೂರು ಜಯಣ್ಣ, ಜಿ.ಪಂ. ಸದಸ್ಯರಾದ ಪೂರ್ಣಿಮಾ ಗೋಪಾಲ್, ಬಿ.ಜೆ. ದೀಪಕ್, ಕೆ.ಪಿ. ಚಂದ್ರಕಲಾ, ಒಕ್ಕಲಿಗ ಯುವ ಬ್ರಿಗೇಡ್ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಕೆ. ಶೇಖರ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಉದ್ಯಮಿ ಹರಪಳ್ಳಿ ರವೀಂದ್ರ, ಅರುಣ್ ಕಾಳಪ್ಪ, ವಿಎಸ್‍ಎಸ್‍ಎನ್ ನಿರ್ದೇಶಕ ಹೆಚ್.ಕೆ. ಮಾದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕಿ ಕೆ.ಪಿ. ಕಮಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಕಿ ವೆಂಕಟೇಶ್ ಪ್ರಾರ್ಥಿಸಿ, ಎಸ್.ಕೆ. ಉದಯ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೇರುಗಳಲೆ ಗ್ರಾ.ಪಂ. ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಒಕ್ಕಲಿಗ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಆದಿಚುಂಚನಗಿರಿ ಮಠಾಧೀಶ ರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಒಕ್ಕಲಿಗ ಸಮುದಾಯ ಬಾಂಧವರಿಂದ ಗುರುವಂದನೆ ಸಲ್ಲಿಸಲಾಯಿತು.