ಕೂಡಿಗೆ, ಫೆ. 16 : ಕೂಡಿಗೆ ಗ್ರಾಮ ಪಂಚಾಯಿತಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಒಂದು ಕೋಟಿ ರೂ ಹಣ ಮಂಜೂರಾಗಿದ್ದು, ಇದರ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ಗ್ರಾ. ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸೋಮವಾರಪೇಟೆ ತಾಲೂಕಿನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಕೂಡಿಗೆ ಗ್ರಾ.ಪಂ. ಆಯ್ಕೆಯಾಗಿದ್ದು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲು ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಗ್ರಾಮಸ್ಥರಿಂದ ಅರ್ಜಿ ಸ್ವೀಕರಿಸಲಾಯಿತು.

ಹುದುಗೂರು ಉಮಾ ಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಚಾಮಿ, ಹುದುಗೂರು ಗ್ರಾಮ ವ್ಯಾಪ್ತಿಯಲ್ಲಿ ಉಪರಸ್ತೆ ಕಾಮಗಾರಿ ನಡೆಸುವಂತೆ ಅರ್ಜಿ ಸಲ್ಲಿಸಿದರು. ಕೂಡಿಗೆ ಗ್ರಾ. ಪಂ.ಯ ಮಾಜಿ ಉಪಾಧ್ಯಕ್ಷರಾದ ಕೆ.ಎಸ್ ಕಾಂತರಾಜ್ ಮತ್ತು ಐಎಸ್ ಗಣೇಶ್ ಹುದುಗೂರಿನಲ್ಲಿ ಖಾಲಿ ಇರುವ ನಿವೇಶನಗಳನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಹಾಗೂ ಬ್ಯಾಡಗೊಟ್ಟದಲ್ಲಿ ಕೂಡಿಗೆ ಗ್ರಾ. ಪಂ.ಗೆ ಸೇರಿದ ಜಾಗವೂ ಇದ್ದು ಆ ಜಾಗದಲ್ಲಿ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ನಿವೇಶನ ನೀಡಬೇಕೆಂದು ಮನವಿ ಮಾಡಿದರು. ಸೀಗೆಹೊಸೂರು ಗ್ರಾಮದಲ್ಲಿ ಅನೇಕ ಕಾಮಗಾರಿ ನಡೆಯಬೇಕಿದ್ದು ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಗ್ರಾಮಸ್ಥರಾದ ದೇವರಾಜ್ ಮತ್ತು ಕೃಷ್ಣ ಅರ್ಜಿ ಸಲ್ಲಿಸಿದರು. ಗ್ರಾ. ಪಂ. ಮಾಜಿ ಸದಸ್ಯ ಟಿ.ಪಿ ಹಮೀದ್ ಕೂಡಿಗೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ನಿರ್ವಹಿಸುವ ಬಗ್ಗೆ ಮನವಿ ಸಲ್ಲಿಸಿದರು. ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಸ್ವಾಮಿ ನಾಯಕ್ ಯೋಜನೆಯ ಬಗ್ಗೆ ಸಭೆಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಸೋಮವಾರಪೇಟೆ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಹೇಮಂತ್ ಕುಮಾರ್, ಜಿ.ಪಂ. ಸದಸ್ಯೆ ಮಂಜುಳಾ, ಇಂಜಿನಿಯರ್ ಕೀರ್ತನ್ ಕುಮಾರ್, ಗ್ರಾ. ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. ಕೆ.ಸಿ. ರವಿ ಸ್ವಾಗತಿಸಿ ವಂದಿಸಿದರು.