ಕುಶಾಲನಗರ, ಫೆ 16: ಇಲ್ಲಿಗೆ ಸಮೀಪದ ದುಬಾರೆ ಪ್ರವಾಸಿಧಾಮದಲ್ಲಿ ಪ್ರವಾಸಿಗರು ಹಾಗೂ ರ್ಯಾಫ್ಟಿಂಗ್ ಸಿಬ್ಬಂದಿಗಳ ನಡುವೆ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದ ಪ್ರವಾಸಿಗನೋರ್ವ ಮೈಸೂರಿನಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.ಈ ಸಂಬಂಧ ದುಬಾರೆ ರ್ಯಾಫ್ಟಿಂಗ್ ನಿರ್ವಹಿಸುತ್ತಿರುವ 7 ಮಂದಿ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.ಹೈದರಾಬಾದ್ ಮೂಲದ ಉದ್ಯೋಗಿ ರಜಿ ಅಹಮ್ಮದ್ (20) ಮೃತ ಯುವಕ. ಗುರುವಾರ 3 ಬಸ್‍ಗಳಲ್ಲಿ 120 ಮಂದಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸಿದ್ದರು. ಇವರೆಲ್ಲ ಹೈದ್ರಾಬಾದ್‍ನ ಸಾಫ್ಟ್‍ವೇರ್ ಕಂಪೆನಿಯ ಸಿಬ್ಬಂದಿ. ಹೊಸಕೋಟೆಯ ರೆಸಾರ್ಟ್ ಒಂದರಲ್ಲಿ ತಂಗಿದ್ದ ಪ್ರವಾಸಿಗರು ಗುರುವಾರ ದುಬಾರೆ ವೀಕ್ಷಣೆಗೆ ಆಗಮಿಸಿದ್ದಾರೆ. ನದಿಯಲ್ಲಿ ನೀರಿನ ಕೊರತೆಯಿದ್ದರೂ ರ್ಯಾಫ್ಟಿಂಗ್ ತೆರಳಿದ ಸಂದರ್ಭ ಬೋಟ್ ಬಂಡೆಯ ನಡುವೆ ಸಿಲುಕಿದೆ. ಈ ಸಂದರ್ಭ ಪ್ರವಾಸಿಗರು ಗೈಡ್‍ನ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪರಸ್ಪರ ಹಲ್ಲೆಗೆ ಕಾರಣವಾಯಿತು ಎನ್ನಲಾಗಿದೆ. ಬಳಿಕ ಪ್ರವಾಸಿಗರು ನದಿ ದಂಡೆಗೆ ಆಗಮಿಸಿದ ಸಂದರ್ಭ ರ್ಯಾಫ್ಟಿಂಗ್ ಸಿಬ್ಬಂದಿಗಳು ಹಾಗೂ ಇತರ ಎಲ್ಲ ಪ್ರವಾಸಿಗರ ನಡುವೆ ಮಾರಾಮಾರಿ ನಡೆದಿದೆ. ರ್ಯಾಫ್ಟಿಂಗ್ ಸಿಬ್ಬಂದಿಗಳು ರ್ಯಾಫ್ಟರ್ ನಡೆಸುವ ಹುಟ್ಟಿನಿಂದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಕೆಲವು ಪ್ರವಾಸಿಗರು ಗಾಯಗಳಾಗಿದ್ದು ರಜಿ ಎಂಬಾತನಿಗೆ ತಲೆಗೆ ಗಂಭೀರವಾಗಿ ಪೆಟ್ಟು ಉಂಟಾಗಿತ್ತು ಎನ್ನಲಾಗಿದೆ.

ಪೊಲೀಸರ ಮಧ್ಯಪ್ರವೇಶದಿಂದ ರಾಜಿ ಸಂಧಾನ ನಡೆಸಿ ಘಟನೆಯಲ್ಲಿ ಗಾಯಗೊಂಡಿದ್ದ ರಜಿ ಅಹಮ್ಮದ್‍ನನ್ನು ಮೈಸೂರಿನ ಕೊಲಂಬಿಯ ಏಷಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಜಿ ಶುಕ್ರವಾರ ಮೃತಪಟ್ಟಿದ್ದಾನೆ. ಈ ಸಂಬಂಧ ದುಬಾರೆಯ 7 ಮಂದಿ ರ್ಯಾಫ್ಟಿಂಗ್ ಸಿಬ್ಬಂದಿಗಳ ಮೇಲೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ನವೀನ್‍ಗೌಡ ತಿಳಿಸಿದ್ದಾರೆ.

ತ್ಯಾಗತ್ತೂರು ಗ್ರಾಮದ ಪ್ರಕಾಶ, ನಂಜರಾಯಪಟ್ಟಣದ ಮಂಜುನಾಥ, ಬಿ.ಎಂ. ದೀಪಕ್, ಸಿ.ವಿ. ಯದು, ಎ. ನಜೀರ್, ಚಿಕ್ಕಬೆಟ್ಟಗೇರಿಯ ಕೆ.ಎ. ಸೋಮಯ್ಯ ಹಾಗೂ ಕುಶಾಲನಗರದ ಹೆಚ್.ಸಿ. ಮಹೇಶ್ ಬಂಧಿತರು.

ಹಲ್ಲೆ ಸಂದರ್ಭ ಹೈದ್ರಾಬಾದ್‍ನ ಪ್ರವಾಸಿಗರಾದ ಯೂಸುಫ್, ಅಬ್ದುಲ್ಲ, ರಾಜಶೇಖರ್, ನಾಸಿರ್ ಮತ್ತು ಅಜಾಹದ್ ಇವರುಗಳೂ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಡೆದಾಟ ಸಂದರ್ಭ ಬಸ್‍ನ ಒಳಗಿದ್ದ ಪ್ರವಾಸಿಗÀರನ್ನು ಹೊರಗೆಳೆದು ಹಲ್ಲೆ ನಡೆಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ದುಬಾರೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಹೊಡೆದಾಟ ದೃಶ್ಯ ದಾಖಲಾಗಿದೆ.