ವೀರಾಜಪೇಟೆ, ಫೆ. 16: ವೀರಾಜಪೇಟೆ ತಹಶೀಲ್ದಾರ್ ಜೀಪು ಚಾಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು ಕಚೇರಿಗೆ ಬರುವ ಎಲ್ಲಾ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವೀರಾಜಪೇಟೆ ತಾಲೂಕು ಹುಲ್ಲು ವ್ಯಾಪಾರಿಗಳ ಸಂಘದ ಅಧ್ಯಕ್ಷ ನೆಲ್ಲಮಕ್ಕಡ ಶಿವಪ್ಪ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲೆಯ ರೈತರು ಬೆಳೆದಿರುವ ಹುಲ್ಲನ್ನು ನ್ಯಾಯ ಸಮ್ಮತವಾದ ಬೆಲೆಗೆ ಕೇರಳಕ್ಕೆ ಮಾರಾಟ ಮಾಡುತ್ತಿದ್ದ, ಮೂರ್ನಾಡು ಬಳಿಯ ಬಾಡಗದಲ್ಲಿ ಲಾರಿಗೆ ಹುಲ್ಲು ತುಂಬಿಸುತ್ತಿರುವಾಗ ತಹಶೀಲ್ದಾರ್ ಜೀಪು ಚಾಲಕ ಸ್ಥಳಕ್ಕೆ ಆಗಮಿಸಿ ಇಲ್ಲಸಲ್ಲದ ದಾಖಲೆಗಳನ್ನು ಪ್ರಶ್ನಿಸಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದರು.
20 ವರ್ಷಗಳಿಂದ ಇದೇ ಕಚೇರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರಲ್ಲದೆ ಸರ್ಕಾರಿ ನೌಕರರಾಗಿದ್ದರೂ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡ್ ಪೈಸಾರಿಯಲ್ಲಿ 8 ಎಕರೆ ಜಾಗವನ್ನು ನೌಕರಿಯ ಪ್ರಭಾವದಿಂದ ತನ್ನ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ತಹಶೀಲ್ದಾರ್ ಕೂಡಲೇ ಚಾಲಕನÀನ್ನು ಅಮಾನತು ಪಡಿಸಿ ಜಾಗವನ್ನು ವಶ ಪಡಿಸಿಕೊಳ್ಳಲು 10 ದಿನಗಳ ಗಡುವು ನೀಡಲಾಗುವದು ಎಂದ ಅವರು, ತಹಶೀಲ್ದಾರರು ಗಡುವಿನ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ರೈತರು ಮಾರಾಟಕ್ಕೆ ಇಟ್ಟಿರುವ ಒಣ ಹುಲ್ಲನ್ನು ತಾಲೂಕು ಕಚೇರಿ ಮುಂದೆ ದಾಸ್ತಾನು ಮಾಡಿ ಪ್ರತಿಭಟನೆ ನಡೆಸಲಾಗುವದು ಎಂದರು.
ಗೋಷ್ಠಿಯಲ್ಲಿ ವ್ಯಾಪಾರಸ್ಥ ಖಾಲಿದ್ ಹಾಗೂ ಗ್ರಾಮಸ್ಥ ಮಂಡೆಟ್ಟಿರ ಅನಿಲ್, ಅಲವಿ, ಉಮ್ಮರ್ ಇತರರು ಉಪಸ್ಥಿತರಿದ್ದರು.