ಕೂಡಿಗೆ, ಫೆ. 16 : ಚಿಕ್ಕ ಅಳುವಾರದ ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನಕಾವೇರಿ, ಸ್ನಾತಕೋತ್ತರ ಕೇಂದ್ರದ ಮಾನವಿಕ ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಐದು ದಿನಗಳ ಶಾಸ್ತ್ರೀಯ ಕನ್ನಡ ಪಠ್ಯಗಳ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಡಿ.ಕೆ. ರಾಜೇಂದ್ರ ಅವರು, ಅತ್ಯಂತ ಆಸಕ್ತಿಯಿಂದ ಕನ್ನಡ ಪಠ್ಯ ಬೋಧನೆ ಯಾದಾಗ ಮಾತ್ರ ಕನ್ನಡ ನಾಡು ನುಡಿಗೆ ಪ್ರಾಧಾನ್ಯತೆ ದೊರೆತಂತಾ ಗುತ್ತದೆ. ಶಿಕ್ಷಣ ಹಂತದಲ್ಲಿಯೇ ಪ್ರಾದೇಶಿಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಬೇಕು. ಸಿದ್ಧತೆ-ಬದ್ಧತೆಗಳಿಂದ ಶಾಸ್ತ್ರೀಯ ಕನ್ನಡ ಬೋಧನೆ ಮಾಡಬೇಕು ಎಂದರು.
ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ತಾಳ್ತಜೆ ವಸಂತಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ, ಕನ್ನಡದ ಆಗು ಹೋಗುಗಳ ಬಗೆಗಿನ ಕ್ರಿಯಾಶೀಲತೆ ಕುಂಠಿತಗೊಂಡಿದೆ. ಹಳೆಗನ್ನಡ ಕಬ್ಬಿಣದ ಕಡೆಲೆಯಲ್ಲ, ಕಂದ ಪದ್ಯ, ಲಯ, ಛಂದಸ್ಸು, ಅಲಂಕಾರ ಮೊದಲಾದವ ಗಳನ್ನು ಹೇಗೆ ಕರಗತ ಮಾಡಿಕೊಳ್ಳ ಬೇಕೆಂಬುದನ್ನು ಇಂತಹ ಶಿಬಿರ ಗಳಿಂದ ಪಡೆಯಬಹುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ ಸಾಗರ್ ಮಾತನಾಡಿ, ಕಲಿಕೆಗೆ ಮುನ್ನ ಹಳೆಯ ಚಾರಿತ್ರಿಕ ವಿಚಾರಗಳನ್ನು ತಿಳಿದು ಕೊಳ್ಳಬೇಕು ಆಗ ಮಾತ್ರ ಯಾವದೇ ವ್ಯಕ್ತಿ ದೇಶ ಕಟ್ಟಲು ಸಾಧ್ಯ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಕೃಷ್ಣಮೂರ್ತಿ ಹನೂರು ಅವರು ಉಪನ್ಯಾಸ ನೀಡಿದರು.
ಇದೇ ಸಂದರ್ಭ ಪ್ರೊ. ಮೈಲಹಳ್ಳಿ ರೇವಣ್ಣ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಚಾಲಕ ಮರಿಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರು, ಶಿಬಿರಾರ್ಥಿಗಳು ಇದ್ದರು.
ಕಾರ್ಯಕ್ರಮವನ್ನು ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕ ಜಮೀರ್ ಅಹಮದ್, ಡಾ. ಮಹಾಂತೇಶ ಪಾಟೀಲ, ಕೆ.ಎಸ್. ಶ್ರೀನಿವಾಸ್ ನಿರ್ವಹಿಸಿದರು.