ವೀರಾಜಪೇಟೆ, ಫೆ. 16: ಸುಮಾರು ಎರಡು ಕೋಟಿ ಅರವತ್ತೆರಡು ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಿನಿ ವಿಧಾನಸೌಧವನ್ನು ತಾ. 18ರಂದು ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಉದ್ಘಾಟಿಸಲಿದ್ದಾರೆ ಎಂದು ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್ ತಿಳಿಸಿದ್ದಾರೆ.ಮಿನಿ ವಿಧಾನಸೌಧದ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ತಾ.17ರಂದು ತಾಲೂಕು ಕಚೇರಿಗೆ ಹಸ್ತಾಂತರ ಮಾಡಲಿದೆ.ಮಿನಿ ವಿಧಾನಸೌಧಕ್ಕೆ ಉಸ್ತುವಾರಿ ಸಚಿವರ ಆಪ್ತ ಹರೀಶ್ ಬೋಪಣ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಟ್ಟಡವನ್ನು ಪರೀಶೀಲಿಸಿ ಉದ್ಘಾಟನೆಗೆ ಗ್ರೀನ್ ಸಿಗ್ನಲ್ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಹರೀಶ್ ಬೋಪಣ್ಣ ಅವರು ನೆಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದೆ. ನೆಲ ಅಂತಸ್ತು ಪೂರ್ತಿಯಾಗಿ ತಾಲೂಕು ಕಚೇರಿ, ಸರ್ವೇ ಕಚೇರಿ, ಕಂಪ್ಯೂಟರ್ ಸಿಬ್ಬಂದಿಗಳು ಪ್ರತ್ಯೇಕ ಕೊಠಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ನೆಲ ಅಂತಸ್ತಿನಲ್ಲಿ ಎಲ್ಲ ವಿಶಾಲವಾದ ಕೊಠಡಿಗಳಿರುವದರಿಂದ ಸಿಬ್ಬಂದಿಗಳು ಅಚ್ಚುಕಟ್ಟು ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ವೀರಾಜಪೇಟೆ ಲೋಕೋಪ ಯೋಗಿ ಇಲಾಖೆ ನೆಲ ಅಂತಸ್ತಿನ ಮೇಲೆ ಇನ್ನೂ ಎರಡು ಅಂತಸ್ತನ್ನು ನಿರ್ಮಿಸಲು ಸರಕಾರಕ್ಕೆ ರೂ. 6 ಕೋಟಿ ಪ್ರಸ್ತಾವನೆ ಕಳಿಸಿದ್ದು, ಇದು ಸರಕಾರದ ಪರಿಶೀಲನೆಯಲ್ಲಿದೆ. ಮಾರ್ಚ್ 1ರಿಂದ ತಾಲೂಕು ಕಚೇರಿ ಹೊಸ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು ಸಿದ್ದತೆಗಳು ನಡೆದಿದೆ ಎಂದು ಹರೀಶ್ ಬೋಪಣ್ಣ ತಿಳಿಸಿದರು.
ಈ ಸಂದರ್ಭ ಉಪ ಆಯುಕ್ತ ನಂಜುಂಡೇಗೌಡ, ಲೋಕೋಪ ಯೋಗಿ ಅಧಿಕಾರಿಗಳಾದ ಎಂ.ಸುರೇಶ್, ಹೇಮಂತ್ ಮತ್ತಿತರರು ಹಾಜರಿದ್ದರು.