ವೀರಾಜಪೇಟೆ, ಫೆ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ 35 ಅಂಗಡಿ ಮಳಿಗೆಗಳನ್ನು ತಾ. 19ರಂದು ಬಹಿರಂಗ ಹರಾಜಿಗೆ ವ್ಯವಸ್ಥೆಗೊಳಿಸಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಕಚೇರಿಯ ಅಧಿಕಾರಿಗಳು ನ್ಯಾಯಾಲಯದ ಮುಂದೆ ತಾ. 17ರಂದು (ಇಂದು) ಖುದ್ದು ಹಾಜರಾಗಿ ದಾಖಲೆಗಳ ಸಮೇತ ವಿವರಣೆ ನೀಡುವಂತೆ ನ್ಯಾಯಾಲಯ ತುರ್ತು ನೋಟೀಸ್ ಜಾರಿ ಮಾಡಿದೆ.

ಅನೇಕ ವರ್ಷಗಳಿಂದ ಬಾಡಿಗೆ ಒಪ್ಪಂದ ಆಧಾರದಲ್ಲಿರುವ ಬಾಡಿಗೆದಾರರಿಗೆ ಮುನ್ಸೂಚನೆ ನೀಡದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಹಿರಂಗ ಹರಾಜಿಗೆ ತೀರ್ಮಾನ ಕೈಗೊಂಡಿರುವದು ಕಾನೂನುಬಾಹಿರ. ಎಲ್ಲ ಬಾಡಿಗೆದಾರರು ಪಂಚಾಯಿತಿಗೆ ನಿಗದಿತ ಅವಧಿಯಲ್ಲಿ ಬಾಡಿಗೆ ಪಾವತಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಎಲ್ಲ ಬಾಡಿಗೆದಾರರಿಂದ ಜನವರಿ 31ರ ತನಕದ ಬಾಡಿಗೆ ವಸೂಲಾತಿ ಮಾಡಿದರೆ ಇನ್ನು ಕೆಲವರಿಂದ ಫೆಬ್ರವರಿ ಕೊನೆಯ ತನಕವೂ ಬಾಡಿಗೆ ವಸೂಲು ಮಾಡಿದ್ದಾರೆ. ಪಂಚಾಯಿತಿಯ ಅಧಿಕಾರಿಗಳು ಬಾಡಿಗೆದಾರರ ಠೇವಣಿ ರೂ. ಒಂದು ಲಕ್ಷದಿಂದ ಮೂರು ಲಕ್ಷದವರೆಗಿನ ಠೇವಣಿ ಹಿಂತಿರುಗಿಸುವ ಚಿಂತನೆ ನಡೆಸಿಲ್ಲ. ತಾ. 28 ರೊಳಗೆ ಮಳಿಗೆ ತೆರವು ಮಾಡುವಂತೆ ಒತ್ತಾಯಿಸಿದ್ದಾರೆ. ಮಳಿಗೆಗಳ ಠೇವಣಿ ಇನ್ನು ಪಂಚಾಯಿತಿ ಕಚೇರಿಯಲ್ಲಿರುವದರಿಂದ ಅಂಗಡಿ ಮಳಿಗೆಗಳಿಗೆ ರೂ. 2 ಲಕ್ಷ ಠೇವಣಿ ಮಾಡಿ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವದಿಲ್ಲ. ಇದಕ್ಕಾಗಿ ತಾ. 19ರಂದು ನಡೆಯುವ 35ಮಳಿಗೆಗಳ ಹರಾಜಿಗೆ ಕಾನೂನು ಬದ್ಧವಾಗಿ ತಡೆಯಾಜ್ಞೆ ನೀಡುವಂತೆ ಒಟ್ಟು 13 ಮಂದಿ ಬಾಡಿಗೆದಾರರು ಪಂಚಾಯಿತಿ ವಿರುದ್ಧ ಸಿವಿಲ್ ದಾವೆ ಹೂಡಿದ್ದು, ಇಂದು ವೀರಾಜಪೇಟೆ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ತಾ. 23-6-2017 ಬಾಡಿಗೆದಾರರಿಗೆ ನೋಟೀಸ್ ಜಾರಿ ಮಾಡಿರುವದಾಗಿ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ. ಮಳಿಗೆಗಳ ಹರಾಜಿನಲ್ಲಿ ಭಾಗವಹಿಸಿಲು ಇಂದು ಪಂಚಾಯಿತಿ ಕಚೇರಿಯಲ್ಲಿ ಬಿಡ್‍ದಾರರು ನೂಕು ನುಗ್ಗಲಿನಲ್ಲಿ ಸರದಿ ಪ್ರಕಾರ ಡಿ.ಡಿ.ರೂಪದಲ್ಲಿ ಠೇವಣಿಯೊಂದಿಗೆ ಅರ್ಜಿ ಸಲ್ಲಿಸುತ್ತಿರುವದು ಕಂಡುಬಂತು.