ಕುಶಾಲನಗರ, ಫೆ. 16: ಪ್ರಸಕ್ತ ಯುವ ಪೀಳಿಗೆ ಹಾಗೂ ಸಮಾಜಕ್ಕೆ ಮಾರ್ಗದರ್ಶಕರ ಕೊರತೆ ಎದುರಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ. ಸ್ಥಳೀಯ ರೈತ ಸಹಕಾರ ಭವನದಲ್ಲಿ ನಡೆದ ಕುಶಾಲನಗರ ಒಕ್ಕಲಿಗರ ಯುವ ವೇದಿಕೆಯ 3 ವಾರ್ಷಿಕೋತ್ಸವ, ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ಬಿಜಿಎಸ್ ವೃತ್ತ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯುವಜನಾಂಗ ದೇಶದ ಸಂಪತ್ತಾಗಿದ್ದು ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು.

ಯುವ ಪೀಳಿಗೆ ದುಷ್ಚಟಗಳಿಗೆ ದಾಸರಾಗದೆ, ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗದೆ ತಮ್ಮ ಜವಾಬ್ದಾರಿ ಅರಿತು ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.

ದಾರ್ಶನಿಕರು, ಮಹಾನ್ ಪುರುಷರ ಆದರ್ಶಗಳನ್ನು ಅಳವಡಿಸಿಕೊಳ್ಳುವದರೊಂದಿಗೆ ತಮ್ಮ ಪೋಷಕರನ್ನು ಪ್ರಥಮ ಗುರುಗಳಾಗಿ ಪರಿಗಣಿಸಬೇಕಿದೆ. ಪೋಷಕರು ಕೂಡ ತಮ್ಮ ನಡತೆ, ಕಾರ್ಯಚಟುವಟಿಕೆಗಳ ಮೂಲಕ ಮಕ್ಕಳಿಗೆ ಆದರ್ಶ ಪ್ರಾಯರಾಗಬೇಕಿದೆ ಎಂದರು.

ಪ್ರಾಸ್ತಾವಿಕ ನುಡಿಗಳಾಡಿದ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ವೇದಿಕೆ ಹಲವು ರೀತಿಯ ಸಾಮಾಜಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದೆ. ಪಟ್ಟಣದಲ್ಲಿ ವೃತ್ತವೊಂದನ್ನು ನಿರ್ಮಿಸಿ ಅದಕ್ಕೆ ಪೂಜ್ಯ ಬಾಲಗಂಗಾಧರನಾಥ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡುವ ದರೊಂದಿಗೆ

(ಮೊದಲ ಪುಟದಿಂದ) ಆದರ್ಶಗಳ ಸ್ಮರಣೆ ಮಾಡುವ ಚಿಂತನೆ ನಡೆಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿದರು.

ಆದಿಚುಂಚನಗಿರಿ ಮಹಾಸಂಸ್ತಾನ ಮಠದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಶಂಭುನಾಥ ಮಹಾಸ್ವಾಮೀಜಿ, ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ಯುವ ವೇದಿಕೆ ತಾಲೂಕು ಅಧ್ಯಕ್ಷ ದೀಪಕ್, ರಾಜ್ಯ ನಿರ್ದೇಶಕ ಹೆಚ್.ಕೆ.ಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮತ್ತಿತರರು ಇದ್ದರು.

ಚಂದ್ರಿಕಾ ಮತ್ತು ತಂಡ ಪ್ರಾರ್ಥಿಸಿತು, ಕಮಲಾಕ್ಷಿ ಮತ್ತು ತಂಡ ನಾಡಗೀತೆ ಹಾಡಿದರು, ಲಲಿತಾ ಮತ್ತು ತಂಡ ರೈತ ಗೀತೆ ಹಾಡಿದರು, ಗಾಯತ್ರಿ ಸ್ವಾಗತಿಸಿದರು, ಲಕ್ಷ್ಮಿನಾರಾಯಣ ನಿರೂಪಿಸಿದರು.

ಸಮುದಾಯ ಬಾಂಧವರಿಗೆ ಹಮ್ಮಿಕೊಂಡಿದ್ದ ಸೌಹಾರ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು. ವೇದಿಕೆ ಕಾರ್ಯಕ್ರಮ ಬಳಿಕ ಸಮಾಜ ಬಾಂಧವರಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸಭೆಗೂ ಮುನ್ನ ನೂತನವಾಗಿ ನಿರ್ಮಾಣಗೊಂಡ ಬಿಜಿಎಸ್ ವೃತ್ತವನ್ನು ನಿರ್ಮಲಾನಂದನಾಥ ಮಹಾಸ್ವಾಮೀಜಿ ಉದ್ಘಾಟಿಸಿದರು. ನಂತರ ಕುಶಾಲನಗರ ಪ್ರಮುಖ ಬೀದಿ ಮೂಲಕ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಗಣ್ಯರನ್ನು ಸಭಾ ಮಂಟಪಕ್ಕೆ ಕರೆ ತರಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಅವರ ಮನೆ ಭೇಟಿ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ ಅಲ್ಲಿ ಪೂಜಾ ಕಾರ್ಯ ನಡೆಸಿದರು.